Monday, January 9, 2017

ಮಕ್ಕಳಿಗೆ ಏನೂ ಗೊತ್ತಿಲ್ಲ ಎನ್ನುವುದೇ ಮಹಾಸುಳ್ಳು! ಲೇಖನ ವಿಶ್ವವಾಣಿಯಲ್ಲಿ 4/1/2017


ಮಕ್ಕಳಿಗೆ ಏನೂ ಗೊತ್ತಿಲ್ಲ ಎನ್ನುವುದೇ ಮಹಾಸುಳ್ಳು!


ಚಿಂತನಶೀಲ ಕವಿ ಖಲೀಲ್ ಗಿಬ್ರಾನ್, ಮಕ್ಕಳ ಕುರಿತು ಹಿರಿಯರಿಗೆ ತಮ್ಮ ಕಾವ್ಯದ ಮೂಲಕ ಎಚ್ಚರಿಕೆ ನೀಡಿರುವುದು ಹೀಗೆ-
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.
ಜೀವನದ ಸ್ವ ಪ್ರೇಮದ ಪುತ್ರ ಪುತ್ರಿಯರು ಅವರು.
ಹೇರಬೇಡಿ ಅವರ ಮೇಲೆ ನಿಮ್ಮ ಆಲೋಚನೆಗಳನ್ನೆಲ್ಲ.
ಏಕೆಂದರೆ ಅವರಿಗೆ ಅವರದ್ದೇ ಸ್ವಂತ ಆಲೋಚನೆಗಳುಂಟು.
ಅವರಂತಿರಲು ನೀವು ಪ್ರಯತ್ನಿಸಬಹುದು.
ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ.
ಆದರೆ ವಾಸ್ತವದಲ್ಲಿ ಪರಿಸ್ಥಿತಿ ಹೀಗಿಲ್ಲ. ಹಿರಿಯರ ಸಮಸ್ಯೆಗೆ ನೀಡುವ ಕಾಲುಭಾಗದಷ್ಟು ಗಮನವನ್ನು ಕೂಡ ಮಕ್ಕಳ ಸಮಸ್ಯೆಗೆ ನೀಡಲಾಗುತ್ತಿಲ್ಲ. ನಮಗೆ ಇವತ್ತಿಗೂ ಮಕ್ಕಳ ಸ್ವತಂತ್ರ ಲೋಕದ ಬಗ್ಗೆ ಅನುಮಾನವಿದೆ. ಮಕ್ಕಳ ವಿಚಾರದಲ್ಲಿ ನಾವು ಬಹಳ ದೊಡ್ಡ ತಪ್ಪೊಂದನ್ನು ಮಾಡುತ್ತಿರುತ್ತೇವೆ. ಆದೆಂದರೆ, ನಾವು ದೊಡ್ಡವರು, ಸರ್ವಜ್ಞರು. ಮಕ್ಕಳು ದಡ್ಡರು, ಅವರಿಗೆ ಏನೂ ಗೊತ್ತಿಲ್ಲ, ಎಲ್ಲವನ್ನೂ ಅವರಿಗೆ ಹೇಳಿಕೊಡಬೇಕಾದವರು ಹಿರಿಯರು ಎಂದು ಭಾವಿಸುವುದು. ಬಹುಶಃ ಇದಕ್ಕಿಂತಲೂ ದೊಡ್ಡದಾದ ಸುಳ್ಳು ಈ ಜಗತ್ತಿನಲ್ಲಿ ಬೇರೆ ಇಲ್ಲ. ಪ್ರತಿ ಮಗುವೂ ಒಂದಲ್ಲಾ ಒಂದು ರೀತಿಯಲ್ಲಿ ಮೇಧಾವಿಯೇ. ಬುದ್ಧಿವಂತಿಕೆಯಲ್ಲೂ ಅವರು ದೊಡ್ಡವರನ್ನು ಹಿಂದಿಕ್ಕುತ್ತಾರೆ. ಅನೇಕ ಸಾರಿ ಮಕ್ಕಳಿಂದಲೇ ಅನೇಕ ವಿಚಾರಗಳನ್ನು ಕಲಿಯಬೇಕಾಗುತ್ತದೆ.
ವಿಪರ್ಯಾಸವೆಂದರೆ, ಮಗುವನ್ನು ನಾವು ಒಂದು ‘ಪುಟ್ಟ ವ್ಯಕ್ತಿ’ ಎಂದು ಭಾವಿಸುತ್ತಿಲ್ಲ. ಮಕ್ಕಳಲ್ಲೂ ವಿಚಾರಗಳಿವೆ, ಭಾವನೆಗಳಿವೆ, ವಿಭಿನ್ನ ಕಲ್ಪನೆಗಳಿವೆ ಎಂದು ನಂಬಲು ನಾವು ಸಿದ್ಧರಿಲ್ಲ. ಮಗು ತನ್ನ ಸುತ್ತಲಿನ ಪರಿಸರವನ್ನು ಅವಲೋಕಿಸಿ, ತನ್ನದೇ ಆದ ರೀತಿಯಲ್ಲಿ ಸ್ಪಂದಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಅರಿಯುವ ಅಗತ್ಯವಿದೆ. ನಮ್ಮ ಭಾವನೆ, ಅಭಿಪ್ರಾಯಗಳನ್ನು, ನಮಗಿಷ್ಟವೆನಿಸಿದ್ದನ್ನು ಮಕ್ಕಳ ಮೇಲೆ ಹೇರುವ ನಾವು ಮಕ್ಕಳಿಂದ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಶಾಲೆಗಳಲ್ಲೂ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಇಂತಿಷ್ಟು ಪಾಠಗಳಿಂದ ಇಂಥದ್ದೇ ಪ್ರಶ್ನೆಗಳನ್ನು ನೀಡುವುದಾಗಿ ಮುಂಚಿತವಾಗಿಯೇ ತಿಳಿಸಿ, ಬಾಯಿಪಾಠ ಮಾಡುವ ಪರಂಪರೆಗೆ ಒತ್ತು ನೀಡಲಾಗುತ್ತಿದೆ. ಮಕ್ಕಳ ಸೃಜನಶೀಲತೆ ನಾಶವಾಗುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ. ನಮ್ಮ ಮಗು ಹೆಚ್ಚು ಅಂಕಗಳಿಸಬೇಕು, ಶಾಲೆಗೆ ಫಸ್ಟ್ ಬರಬೇಕು ಎಂಬ ಪಾಲಕರ ಒತ್ತಾಸೆ ಮಕ್ಕಳ ಪ್ರತಿಭೆಗೆ ಮಾರಕಾಗಿದೆ.
ಮುಂದುವರಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಕ್ಕಳ ಕುರಿತು ನಿರ್ಲಕ್ಷ್ಯ ಹೆಚ್ಚಿದೆ. ಮಕ್ಕಳ ಹಕ್ಕುಗಳ, ಮಕ್ಕಳ ಸಾಹಿತ್ಯದ, ಶಿಕ್ಷಣದ ಬಗ್ಗೆ ಇತರೆ ದೇಶಗಳು ನೀಡಿರುವ ಮಹತ್ವ ನಮ್ಮಲ್ಲಿಲ್ಲ. ಇಂಥ ಸನ್ನಿವೇಶದಲ್ಲಿ ಕೆಲವು ಸಂಘ-ಸಂಸ್ಥೆಗಳು ಮಕ್ಕಳ ಪರವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮಕ್ಕಳ ಬೇಕು-ಬೇಡಗಳ ಬಗ್ಗೆ ರಾಜ್ಯದ ಗಮನ ಸೆಳೆಯಲು ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸುವ ಏಕೈಕ ಸಂಸ್ಥೆ, ಧಾರವಾಡದ ಚಿಲಿಪಿಲಿ ಪ್ರಕಾಶನದ ‘ಗುಬ್ಬಚ್ಚಿಗೂಡು ಪತ್ರಿಕೆಯ ಬಳಗ. ಮಕ್ಕಳ ಅಭ್ಯುದಯವೇ ದೇಶದ ಅಭ್ಯುದಯ ಎಂಬುದನ್ನು ಮನಗಂಡ ಈ ಸಂಸ್ಥೆ 16 ವರ್ಷಗಳಿಂದ ಮಕ್ಕಳಿಗಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಮಾಡುತ್ತ ಮಕ್ಕಳ ಲೋಕಕ್ಕೊಂದು ಹೊಸ ಆಯಾಮ ಕೊಡುವ ಪ್ರಯತ್ನ ನಡೆಸುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಮಕ್ಕಳ ಅಕಾಡೆಮಿಯೊಂದನ್ನು ಸ್ಥಾಪಿಸಿದ್ದಲ್ಲದೆ ಅದು ಹೇಗೆ ಕೆಲಸ ಮಾಡಬೇಕೆಂದು ತೋರಿಸಿದ ಹಿರಿಮೆ ಈ ಬಳಗದ್ದು.
ಈಗಾಗಲೇ ಧಾರವಾಡ, ಗದಗ, ಬೆಳಗಾವಿ, ಹುಬ್ಬಳ್ಳಿಗಳಲ್ಲಿ ಸಾರ್ವಜನಿಕ ನೆರವಿನಿಂದ ರಾಜ್ಯ ಮಟ್ಟದ 5 ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದೆ. ಕಂಚ್ಯಾಣಿ ಶರಣಪ್ಪ, ಎಚ್.ಎಸ್. ವೆಂಕಟೇಶಮೂರ್ತಿ, ಶಂ.ಗು.ಬಿರಾದಾರ, ಬಿ.ಎ. ಸನದಿ, ನಾ. ಡಿಸೋಜ ಈ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು. ಚೆನ್ನವೀರ ಕಣವಿ, ಗುರುಲಿಂಗ ಕಾಪಸೆ, ಸಿದ್ದಲಿಂಗ ಪಟ್ಟಣಶೆಟ್ಟಿ, ಪಾಟೀಲ ಪುಟ್ಟಪ್ಪ, ಮಾಲತಿ ಪಟ್ಟಣಶೆಟ್ಟಿ ಹೀಗೆ ನಾಡಿನ ಹಿರಿ-ಕಿರಿಯರು ಈ ಸಮ್ಮೇಳನಗಳಲ್ಲಿ ಭಾಗವಹಿಸಿ ಮಕ್ಕಳ ಕುರಿತು, ಸಾಹಿತ್ಯದ ಕುರಿತು ಚಿಂತನ ಮಂಥನ ನಡೆದು ಮಕ್ಕಳ ಅಕಾಡೆಮಿಯೊಂದೊಂದು ಸ್ಥಾಪನೆಯಾಗುವಂತೆ ಮಾಡಿದರು.
ಈಗ ಕರ್ನಾಟಕ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನವನ್ನು ಜ. 6, 7 ಹಾಗೂ 8 ರಂದು ಧಾರವಾಡದ ಶ್ರೀ ಉಳವಿ ಚೆನ್ನಬಸವಣ್ಣ ದೇವಾಲಯದ ಆವರಣದಲ್ಲಿ ನಡೆಸಲು ಗುಬ್ಬಚ್ಚಿ ಗೂಡು ಚಿಲಿಪಿಲಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ ಅನೇಕ ಸಂಘಟನೆಗಳು ನಿರ್ಧರಿಸಿವೆ. ನಾಡಿನ ಖ್ಯಾತ ಲೇಖಕಿ, ಮಕ್ಕಳ ಸಾಹಿತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರು ಈ ಬಾರಿಯ ಸಮ್ಮೇಳನದ ಅಧ್ಯಕ್ಷೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಒಟ್ಟು 2000ಕ್ಕೂ ಅಧಿಕ ಮಕ್ಕಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 500ಕ್ಕೂ ಹೆಚ್ಚು ಮಕ್ಕಳ ಸಾಹಿತಿಗಳು, ಮಕ್ಕಳ ಸಂಘಟಿಕರು, ಚಿಂತಕರು, ಶಿಕ್ಷಕರು, ಪಾಲಕರು ಭಾಗವಹಿಸಲಿದ್ದಾರೆ. ಬಾಲಪ್ರತಿಭೆಗಳಾದ ವಿಶ್ವಪ್ರಸಾದ ಗಾಣಗಿ, ಅಂತಃಕರಣ, ಆಶ್ಮಾ ದಿನದಾರ, ಮಣಿಕಂಠ ತುಡಬಿ, ಪ್ರಫುಲ್ ವಿಶ್ವಕರ್ಮ, ಪ್ರತಿಕ್ಷಾ ಕುಲಕರ್ಣಿ ಇವರಿಂದ ಮಕ್ಕಳ ಸಾಹಿತಿ ನಾ. ಡಿಸೋಜ್ ಅವರ ಸಮ್ಮುಖದಲ್ಲಿ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ.
ಮಕ್ಕಳ ಆಸಕ್ತಿಗೆ ಅನುಗುಣವಾಗಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಗೀಚಾಟ ಕಟ್ಟೆ, ವಿಸ್ಮಯ ವಿಜ್ಞಾನ ಕಟ್ಟೆ, ಕಸದಿಂದ ರಸ, ಮಜಾ ಗಣಿತ ಕಟ್ಟೆ, ಜಾದೂ ಕಟ್ಟೆ, ಬಹುಭಾಷಾ ಕಟ್ಟೆ, ಅರಳಲಿ ಅರಳು ಕಟ್ಟೆ, ಮೆದುಳಿಗೆ ಮೇವು ಕಟ್ಟೆ, ದೃಶ್ಯ ದರ್ಶನ ಕಟ್ಟೆ, ಆಟದ ಕಟ್ಟೆ, ಅಭಿನಯ ಅಭಿವ್ಯಕ್ತಿ ಕಟ್ಟೆ, ಸಾಹಸ ಕ್ರೀಡಾ ಕಟ್ಟೆ, ಮಣ್ಣು-ನೀರು-ಗಾಳಿ ಕೌತುಕ ಕಟ್ಟೆ, ಕಥಾ ಕಟ್ಟೆ, ಬುಡಕಟ್ಟು ಕಲಾ ದರ್ಶನ ಕಟ್ಟೆ, ಮದರಂಗಿ ಕಟ್ಟೆಯಂಥ 16 ಕಾರ್ನರ್‌ಗಳು ಮಕ್ಕಳನ್ನು ತಮ್ಮ ಲೋಕಕ್ಕೆ ಕರೆದೊಯ್ಯಲಿವೆ.
‘ತಮ್ಮದೇ ಆದ ಲೋಕದಲ್ಲಿ ವಿಹರಿಸಲು ಇಚ್ಛಿಸುವ ಮಕ್ಕಳ ಬಾಲ್ಯದ ರೆಕ್ಕೆ ಪುಕ್ಕಗಳನ್ನು ಹಿರಿಯರು ತಮ್ಮ ಸ್ವಾರ್ಥ, ಘನತೆ, ಗೌರವ ಮತ್ತು ಸ್ಥಾನಮಾನಗಳಿಗಾಗಿ ಬಲಿ ನೀಡುತ್ತಿರುವುದನ್ನು ನಾವೆಲ್ಲರೂ ಗಂಭೀರವಾಗಿ ಗಮನಿಸಬೇಕು. ಇದಕ್ಕೆ ಪರಿಹಾರ ಇರುವುದು ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಯಲ್ಲಿ ಮತ್ತು ಪೋಷಕರ ಮನೋಧರ್ಮದ ಬದಲಾವಣೆಯಲ್ಲಿ. ಇಂದಿನ ಪೋಷಕರು ತಮ್ಮ ಬಾಲ್ಯವನ್ನು ಒಮ್ಮೆ ನೆನಪಿಸಿಕೊಂಡರೆ ತಮ್ಮ ಮಕ್ಕಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಮನಗಾಣುವುದು ಕಷ್ಟವೇನಲ್ಲ. ಆದರೆ ಕಾಲ ಬದಲಾಗಿದೆ ಎನ್ನುತ್ತಾ, ಬದಲಾವಣೆಯ ಹೊರೆಯನ್ನು ಕಂದಮ್ಮಗಳ ಮೇಲೆ ಹೇರುತ್ತಿರುವ ಪೋಷಕರು, ಶಾಲೆಗಳು ಮತ್ತು ಸಮಾಜ, ಈ ಸಾಲಿನ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಾದರೂ ಆತ್ಮಾವಲೋಕನ ಮಾಡಿಕೊಳ್ಳದೇ ಹೋದಲ್ಲಿ ಮುಂದಿನ ದಿನಗಳು ಮತ್ತಷ್ಟು ಕಠಿಣವಾಗುವುದರಲ್ಲಿ ಅನುಮಾನವಿಲ್ಲ’ ಎನ್ನುವ ಸಮ್ಮೇಳನ ಸಂಚಾಲಕ ಶಂಕರ ಹಲಗತ್ತಿಯವರ ಮಾತು ಅಕ್ಷರ ಸಹ ಸತ್ಯ ಅಲ್ಲವೇ?
-ಪರಮೇಶ್ವರಯ್ಯ ಸೊಪ್ಪಿಮಠ,
ಶಿಕ್ಷಕರು

No comments:

Post a Comment