Wednesday, March 30, 2011

learning article in prajavani on 21/3/2011




ಕಲಿಕೆ ಆಗಬೇಕು ಲವಲವಿಕೆ

ಪರಮೇಶ್ವರಯ್ಯ ಸೊಪ್ಪಿಮಠ

ಮಕ್ಕಳ ಬಾಳಿನಲ್ಲಿ ಪರೀಕ್ಷಾ ಅವಧಿ ಅತ್ಯಂತ ಪ್ರಮುಖ ಘಟ್ಟ. ಅದರಲ್ಲಿನ ಸೋಲು-ಗೆಲುವು

ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಅದಕ್ಕೆ ಪ್ರಸ್ತುತ ಪರೀಕ್ಷಾ ಸಮಯದಲ್ಲಿ ಮಕ್ಕಳ

ಕಲಿಕೆಗೆ ನೆರವಾಗುವಂತಹ ಅಂಶಗಳು ಮಕ್ಕಳಿಗೆ ದೊರೆಯಬೇಕು.
ನಾವು ಬದುಕಿನ ಪ್ರತಿಕ್ಷಣದಲ್ಲೂ ನಮಗೆ ತಿಳಿದೋ-ತಿಳಿಯದೋ ಕಲಿಕೆಯನ್ನು

ಮಾಡುತ್ತಿರುತ್ತೇವೆ. ನಾವು ಹುಟ್ಟಿದಂದಿನಿಂದ ಪ್ರತಿಯೊಂದು ನಡೆ-ನುಡಿ ಇತ್ಯಾದಿಗಳು

ಕಲಿಕೆಯಿಂದಲೇ ಬಂದಿವೆ. ಅದೇ ರೀತಿ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಗಳು ಮತ್ತು

ಆಟಗಳು ಕಲಿಕೆಯಿಂದಲೇ ನಮ್ಮ ಜೊತೆಗೂಡಿವೆ.

ಕಲಿಕೆಯಲ್ಲಿ ಅನೇಕ ಬಗೆಗಳನ್ನು ಗುರುತಿಸಬಹುದು. ಶಾಲಾ ಕಲಿಕೆಯಲ್ಲಿ ಪಠ್ಯಗಳ,

ಶಿಕ್ಷಕರ, ಸಹಪಾಠಿಗಳ ಮುಖಾಂತರ ಸಾಕಷ್ಟು ಹೊಸ ವಿಷಯಗಳ ಕಲಿಕೆಯಾಗುತ್ತದೆ. ವರ್ಣಮಾಲೆ

ಮುಖಾಂತರ ಭಾಷೆಯ ಓದು-ಬರಹ ಕಲಿತರೆ, ಅಂಕಿ-ಸಂಖ್ಯೆಗಳ ಮುಖಾಂತರ ಗಣಿತದ ಮೂಲ

ಕ್ರಿಯೆಗಳನ್ನು ಅರಿಯುತ್ತೇವೆ. ಇವುಗಳ ನಡುವೆ ಅನೇಕ ಅಂಶಗಳು ನಮ್ಮ ಗಮನಕ್ಕೆ ಬಾರದೇ

ನಮ್ಮೊಳಗೆ ಸೇರಿರುತ್ತವೆ. ಉದಾಹರಣೆಗೆ ಆತಂಕ, ದುಗುಡ, ಆನಂದ ಇಂತಹವು ನಾವು ಕಲಿಯದೇ

ನಮ್ಮ ಅಂತರಂಗವನ್ನು ಸೇರಿರುತ್ತವೆ.

ಈ ಅಂಶಗಳು ಪರೀಕ್ಷಾ ಸಮಯದಲ್ಲಿ ಹೆಚ್ಚಾಗುತ್ತವೆ. ಅದಕ್ಕೆ ಪ್ರಮುಖ ಕಾರಣವೆಂದರೆ

ನಾವು ಪರೀಕ್ಷಾದೃಷ್ಟಿಯಿಂದ ಮಾತ್ರ ಕಲಿಕೆ ಮಾಡುತ್ತಿರುವುದು. ನಮ್ಮೊಳಗೆ ಸಂಗ್ರಹವಾದ

ವಿಷಯವನ್ನು ಹೊರಹಾಕುವುದೇ ಪರೀಕ್ಷೆಯ ಪ್ರಮುಖ ಧ್ಯೇಯ. ಪರೀಕ್ಷೆಯಲ್ಲಿ ಎಷ್ಟೆಷ್ಟು

ಯಶಸ್ಸು ಗಳಿಸುತ್ತೇವೆ ಅಷ್ಟಷ್ಟು ಕಲಿಕೆಯಾಗಿದೆ ಎನ್ನುತ್ತಾರೆ. ಈ ಯಶಸ್ಸು ನನಗೆ

ಹುಳಿದ್ರಾಕ್ಷಿಯಾಗಬಹುದು ಎಂಬ ಅನುಮಾನ ಬಂದಾಗ ಪರೀಕ್ಷಾ ಭಯ ಆವರಿಸಿಕೊಳ್ಳಲಾರಂಭಿ

ಸುತ್ತದೆ. ಅದರಿಂದ ಮುಕ್ತರಾಗ ಬೇಕಾದರೆ ಇರುವ ಸುಲಭ ಮಾರ್ಗವೆಂದರೆ ಸರಿಯಾಗಿ ಕಲಿಕೆ.

ಅನೇಕ ಮಕ್ಕಳ ಬಹುದೊಡ್ಡ ಸಮಸ್ಯೆ ಎಂದರೆ ಸರಿಯಾದ ಕಲಿಕೆಗೆ ಬೇಕಾದ ಮಾರ್ಗದರ್ಶನ

ಸಿಗುತ್ತಿಲ್ಲ ಎಂಬುದು. ಅದು ಸಿಗುವುದಿಲ್ಲ, ಬದಲಾಗಿ ಅದನ್ನು ಅವರೇ

ಹುಡುಕಿಕೊಳ್ಳಬೇಕು. ಆಗ ಅವರಿಗೆ ಪರೀಕ್ಷೆ ಸುಲಿದ ಬಾಳೆಹಣ್ಣಿನಂತಾಗುತ್ತದೆ.

ಈ ನಿಟ್ಟಿನಲ್ಲಿ ಕಲಿಕೆ ಲವಲವಿಕೆಯಂತಾಗಲು ಹತ್ತು ಅಂಶಗಳನ್ನು ಗುರುತಿಸಿ ನೀಡಲಾಗಿದೆ.

ಮಕ್ಕಳು ಪರೀಕ್ಷಾ ಜ್ವರದಿಂದ ಮುಕ್ತರಾಗಲು ಇವು ತಮ್ಮದೇ ಆದ ಕೊಡುಗೆಗಳನ್ನು

ನೀಡುವುದರಲ್ಲಿ ಸಂಶಯವಿಲ್ಲ.
ಆತ್ಮವಿಶ್ವಾಸ ಬಹು ಮುಖ್ಯ: ಅನೇಕ ಮಕ್ಕಳಿಗೆ ಗಣಿತ ಮತ್ತು ಆಗ್ಲಭಾಷೆಗಳು ಕಬ್ಬಿಣದ

ಕಡಲೆ. ಅವರು ಮೊದಲೇ ನಿರ್ಧರಿಸುತ್ತಾರೆ ಇದು ನನ್ನಿಂದ ಸಾಧ್ಯವಿಲ್ಲ. ಇದನ್ನೇ

ಪರೀಕ್ಷಾ ಹಂತದಲ್ಲೂ ಅನೇಕರು ಹೇಳುತ್ತಾರೆ. ಈ ರೀತಿಯಾಗಿ ತಮ್ಮ ಮೇಲೆ ತಮಗೆ ನಂಬಿಕೆ

ಇಲ್ಲದಿದ್ದಾಗ ಕಲಿಕೆಯಾಗಲು ಸಾಧ್ಯವಿಲ್ಲ.
ಕಲಿಕೆಯ ಯಶಸ್ಸಿನ ಮೊದಲ ಮೆಟ್ಟಿಲೆಂದರೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ

ವಿಶ್ವಾಸವಿರಲಿ. ಕೆಲ ಸಾರಿ ಮಕ್ಕಳಲ್ಲಿ ನಂಬಿಕೆ ಇದ್ದರೂ ಶಿಕ್ಷಕರು ಮತ್ತು ಪಾಲಕರು

ಆನಂಬಿಕೆಗೆ ಕೊಡಲಿ ಪೆಟ್ಟು ಹಾಕುತ್ತಾರೆ. ನಮ್ಮಪ್ಪನ ಆಣೆಗೂ ನೀನು ಈ ಜನ್ಮದಲ್ಲಿ

ಉದ್ಧಾರವಾಗೋದಿಲ್ಲ ಎಂಬಂತಹ ನಿರುತ್ಸಾಹದ ಮಾತುಗಳು ಮಕ್ಕಳ ಆತ್ಮಸ್ಥೈರ್ಯವನ್ನೇ

ಅಳಿಸಿಹಾಕುತ್ತದೆ. ಹಾಗಾಗಿ ಮಕ್ಕಳ ಕಲಿಕೆ ಹೆಚ್ಚಳಕ್ಕೆ ಹುರಿದುಂಬಿಸುವುದು

ಅಗತ್ಯವಾಗಿದೆ.
ಮರಳಿ ಯತ್ನವ ಮಾಡು: ಕೆಲ ವಿಷಯಗಳು ತಕ್ಷಣ ಕಲಿಕೆಯಾಗಿಬಿಡುತ್ತವೆ. ಅದರೆ ಕೆಲವು

ಎಷ್ಟು ಸಾರಿ ಪ್ರಯತ್ನಿಸಿದರೂ ಮನದೊಳಕ್ಕೆ ಇಳಿಯುವುದೇ ಇಲ್ಲ. ಆಗ ಸಾಮಾನ್ಯವಾಗಿ ನಾವು

ನಿರಾಸಕ್ತಿ ಹೊಂದುತ್ತೇವೆ. ಕೆಲ ವಿಷಯ ಹಾಗೂ ಪಾಠಗಳು ಕಠಿಣವಾಗಹಬಹುದು.

ಅವುಗಳನ್ನು ಸಂಪೂರ್ಣವಾಗಿ ಕೈ ಬಿಡದೇ, ಅದಕ್ಕೆ ಕಾರಣಗಳನ್ನು ಪತ್ತೇ ಹಚ್ಚುತ್ತಾ,

ನನ್ನ ಮನಸ್ಸಿಗಿಂತ ಇವು ದೊಡ್ಡವೇನಲ್ಲ ಎನ್ನುವ ಭಾವನೆ ತಾಳುತ್ತಾ ಮತ್ತೆ-ಮತ್ತೆ,

ಅನೇಕ ಬಾರಿ ಯತ್ನಿಸಬೇಕು. ಕೊನೆಗೆ ಖಂಡಿತವಾಗಿ ಯಶಸ್ಸು ಸಿದ್ಧಿಸುತ್ತದೆ. ಆಗ ಸಿಗುವ

ಆನಂದವೇ ಬೇರೆ, ಅದನ್ನು ಅನುಭವಿಸಿಯೇ ನೋಡಬೇಕು.

ಪ್ರತಿ ಹೆಜ್ಜೆ ಕಲಿಕೆಯನ್ನು ಬಲ ಗೊಳಿಸುತ್ತದೆ: ಕಲಿಕೆಗಾಗಿ ನಾವು ಯಾವ ಯಾವ

ರೀತಿಯಲ್ಲಿ ಮುನ್ನುಗ್ಗುತ್ತೇವೆಯೋ ಅದೇ ರೀತಿ ಕಲಿಕೆ ನಮ್ಮಲ್ಲಿ

ಬಲಗೊಳ್ಳುತ್ತಿರುತ್ತದೆ. ಬೇವಿನ ಬೀಜ ನೆಟ್ಟು ಮಾವಿನ ಹಣ್ಣನ್ನು ನೀರೀಕ್ಷಿಸುವುದು

ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಕಠಿಣ ಪ್ರಯತ್ನ ಮಾಡದೇ ಕಲಿಕೆಯ ಯಶಸ್ಸು ನನಗೆ

ದೊರೆಯಬೇಕೆಂದರೆ ಸಾಧ್ಯವಿಲ್ಲ.

ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ. ಪರೀಕ್ಷೆಗಳಲ್ಲಿ ಅನೈತಿಕ ಮಾರ್ಗಗಳ

ಮುಖಾಂತರ ಯಶ ಪಡೆದರೂ ಅದು ತಾತ್ಕಾಲಿಕ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಅದರಿಂದ

ಹೆಚ್ಚಿನ ಲಾಭ ಸಿಗುವುದಿಲ್ಲ. ಸಾಮರ್ಥ್ಯಕ್ಕೆ ಎಂದಿದ್ದರೂ ಗೆಲುವು ಕಟ್ಟಿಟ್ಟ

ಬುತ್ತಿ.

ನನ್ನ ಏಳ್ಗೆ ನನ್ನ ಕೈಯಲ್ಲಿ: ನಾವು ಕಲಿವ ಕಲಿಕೆ ಬೇರೆ ಯಾರಿಗೂ ಅಲ್ಲ ಎಂಬುದು ಮೊದಲು

ತಿಳಿಯಬೇಕು. ನನ್ನ ಕಲಿಕೆಯಿಂದ ನನಗೆ ಹೆಚ್ಚು ಲಾಭ ಸಿಗುತ್ತದೆ. ನಾನು ಕಲಿತು

ಮತ್ತಾರನ್ನೋ ಉದ್ಧಾರ ಮಾಡಬೇಕೆಂಬ ಮನೋಭಾವದಿಂದ ಮೊದಲು ಹೊರಬರಬೇಕು. ಅದರ ಬದಲಾಗಿ

ನನ್ನ ಏಳ್ಗೆ ನನ್ನ ಕೈಯಲ್ಲಿದೆ ಎನ್ನುತ್ತಾ ಕಲಿಕೆಯನ್ನು ಗಟ್ಟಿಗೊಳಿಸುತ್ತಾ

ಸಾಗಬೇಕು. ನನ್ನದು ಎಂಬ ಭಾವನೆ ಬಂದರೆ ಸಾಕು ನಾವು ಅದರತ್ತ ಸುಲಭವಾಗಿ ಸಾಗುತ್ತೇವೆ.

ಆ ಹಾದಿಯಲ್ಲಿ ನಮ್ಮಗಳ ಕಲಿಕೆ ನಡೆಯಬೇಕು.

ನನಗೂ-ಮತ್ತೊಬ್ಬರಿಗೂ ಅಂತರವಿದೆ: ನಮ್ಮಲ್ಲಿ ಸಾಮಾನ್ಯವಾಗಿ ಹೋಲಿಕೆಯ ಗುಣ

ಬೆಳೆದಿರುತ್ತದೆ. ಪ್ರತಿಯೊಂದಕ್ಕೂ ಹೋಲಿಕೆ ಮಾಡಿಕೊಳ್ಳುತ್ತಿರುತ್ತೇವೆ. ಶಾಲಾ

ಹಂತದಲ್ಲಿ ಸಹಪಾಠಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಇದರಿಂದ

ಲಾಭಕ್ಕಿಂತ ನಷ್ಟವೇ ಅಧಿಕ.

ಯಾಕೆಂದರೆ ಓದು, ಬರಹ, ನೆನಪಿನ ಶಕ್ತಿ ಮುಂತಾದವುಗಳು ಎಲ್ಲರಲ್ಲೂ ಒಂದೇ ರೀತಿಯಾಗಿರಲು

ಸಾಧ್ಯವಿಲ್ಲ. ಅಲ್ಲದೇ ಒಬ್ಬೊಬ್ಬರು ಒಂದೊಂದು ವಿಧಾನವನ್ನು ಅನುಸರಿಸುತ್ತಿರುತ್ತಾರೆ.

ಅದಕ್ಕೆ ಅವರು ಸಾಗುತ್ತಿದ್ದಾರೆಂದು ಆ ದಾರಿಯಲ್ಲಿ ನಾನು ಸಾಗಿದಾಗ ಗೆಲುವು

ಮರೀಚಿಕೆಯಾಗಬಹುದು. ಅದಕ್ಕೆ ನಿಮ್ಮ ಕಲಿಕೆಯನ್ನು ಯಶಸ್ಸಿನತ್ತ ಸಾಗಿಸಲು ನೆರವಾಗುವ

ದಾರಿಗಳನ್ನು ನೀವೇ ಕಂಡು ಕೊಂಡು ಸಾಗಬೇಕು. ಅದರಿಂದ ನಿಮ್ಮ ಕಲಿಕೆ ಸರಳ-ಸುಲಭವಾಗಿ

ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಹಂತ ಹಂತವಾಗಿ ಸಾಗಬೇಕು: ಕಲಿಕೆ ಎಂಬುದು ದೇವರು ನಮಗೆ ನೀಡಿದ ವರ. ಅದಕ್ಕೆ ಹಲವಾರು

ವಿಶೇಷತೆಗಳಿವೆ. ಅನೇಕ ಅಧ್ಯಯನಗಳ ಮುಖಾಂತರ ಹಂತಹಂತವಾಗಿ ಕಲಿತ ಅಂಶ ಹೆಚ್ಚು ಕಾಲ

ನೆಲೆಯೂರುತ್ತದೆ. ಅದರ ಬದಲು ಒಂದೇ ಸಾರಿಗೆ ಅನೇಕ ಹಂತಗಳನ್ನು ಜಂಪ್ ಮಾಡಿ ಮುಂದೆ

ಹೋದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳೇ ಹೆಚ್ಚು. ಮೊದಲಿಗೆ ಯಾವ ರೀತಿ

ಕಲಿಕೆಯಲ್ಲಿ ತೊಡಗಿಕೊಂಡಿದ್ದೇವೆಯೋ ಅದೇ ರೀತಿ ಮುಂದಿನ ಕಲಿಕೆಯಲ್ಲಿ

ತೊಡಗಿಕೊಳ್ಳಬೇಕು.

ಹೊಸತನ್ನು ಅಭ್ಯಾಸ ಮಾಡುವಾಗ ಹಿಂದಿನದನ್ನು ಸರಿಯಾಗಿ ತಿಳಿದುಕೊಂಡಿರಲೇ ಬೇಕು. ಅದರ

ಮೇಲೆಯೇ ಮುಂದಿನ ಕಲಿಕೆಯನ್ನು ನಿರ್ಮಿಸಿದರೆ ಅದು ಭದ್ರವಾಗುತ್ತದೆ. ಹೊಸದರ ಕಲಿಕೆ

ಸರಿಯಾಗಿಲ್ಲವೆಂದರೆ ಹಿಂದಿನ ಮೆಟ್ಟಿಲನ್ನು ಸರಿಯಾಗಿ ಹತ್ತಿಲ್ಲ ಎಂದು ತಿಳಿಯಬೇಕು.

ಅಲ್ಲಿರುವ ದೋಷವನ್ನು ಸರಿಪಡಿಸಿಕೊಂಡು ಮುಂದೆ ಸಾಗಿದಲ್ಲಿ ಗೆಲುವಿನ ಹತ್ತಿರ

ಸಾಗಿದಂತೆ.

ಅವಸರವೇ ಅನಾಹುತಕ್ಕೆ ಕಾರಣ: ಬಹುತೇಕ ಮಕ್ಕಳು ನಾನಾ ಕಾರಣಕ್ಕೆ ಅವಸರದ ಕಲಿಕೆಗೆ

ಶರಣಾಗುತ್ತಾರೆ. ಒಂದೇ ಸಮಯದಲ್ಲಿ ಎಲ್ಲವನ್ನೂ ಕಲಿತುಬಿಡಬೇಕೆಂಬ ಮನೋಭಾವನೆ

ಒಳ್ಳೆಯದಲ್ಲ. ಕಲಿಕೆ ನಮ್ಮಲ್ಲಿ ಹೆಚ್ಚು ಸಬಲವಾಗಲು ವಿಷಯಗಳನ್ನು ಸರಿಯಾಗಿ ಮತ್ತು

ಆಳವಾಗಿ ಮನನಮಾಡಿಕೊಂಡು, ಅವಶ್ಯ ವಿದ್ದಾಗ ಬಳಸಿಕೊಳ್ಳುವ ಜಾಣ್ಮೆಯನ್ನು

ಮೈಗೂಡಿಸಿಕೊಳ್ಳಬೇಕು. ಇದು ಸಮರ್ಪಕವಾಗಬೇಕಾದರೆ ಅವಸರವಸರವಾಗಿ ಕಲಿಯುವುದರಿಂದ

ಸಾಧ್ಯವಿಲ್ಲ. ಕಲಿಯಬೇಕಾದ ವಿಷಯದ ಕಠಿಣತೆ, ಆಳ ಮುಂತಾದ ಅಂಶಗಳನ್ನು ಪರಿಗಣಿಸಿ

ಸಮಯವನ್ನು ಬಳಸಬೇಕು. ಅದರ ಬದಲಾಗಿ ಅವಸರಕ್ಕೆ ಜಾರಿದರೆ ಅನಾಹುತವಾಗುತ್ತದೆ.

ಒತ್ತಡ ಒಳ್ಳೆಯದಲ್ಲ: ಕಲಿಕೆಯನ್ನು ಯಾರದೋ ಒತ್ತಡಕ್ಕೆ ಮಾಡಿದರೆ ಅದು ನಮ್ಮ

ಕೈಗೆಟುಕುವುದಿಲ್ಲ. ಅದಕ್ಕೆ ಪಾಲಕರು ಮಕ್ಕಳನ್ನು ಕಷ್ಟಪಟ್ಟು ಓದುವುದಕ್ಕಿಂತ

ಇಷ್ಟಪಟ್ಟು ಓದುವಂತೆ ನೋಡಿಕೊಳ್ಳಬೇಕು.

ನಿಮ್ಮ ಮನಸ್ಸು ನಿಮ್ಮ ಕೈಯಲ್ಲಿರಲಿ: ಕೆಲ ಮಕ್ಕಳು ಹೇಳುತ್ತಾರೆ ನಾನು ಅನೇಕ ಗಂಟೆಗಳ

ಕಾಲ ಓದುತ್ತೇನೆ. ಆದರೆ ನಂತರದ ಕೆಲ ಸಮಯದಲ್ಲಿ ಏನು ಓದಿದ್ದೇನೆ ಎಂಬುದೇ ನನಗೆ

ಜ್ಞಾಪಕವಿರುವುದಿಲ್ಲ. ಇದರ ಅರ್ಥ ಮನಸ್ಸಿಟ್ಟು ನಾನು ಓದುತ್ತಿಲ್ಲ ಎಂಬುದು. ಕಲಿಕೆಯ

ಎಲ್ಲಾ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವಾಗ ನಮ್ಮ ಮನಸ್ಸನ್ನು ಅಲ್ಲಿಯೇ

ಕೇಂದ್ರೀಕರಿಸಬೇಕು.

ಅದು ಚಂಚಲ ಸ್ವಾಭಾವದ್ದಾಗಿರುವುದರಿಂದ ಅತ್ತಿತ್ತ ಹರಿದಾಡದಂತೆ ಜಾಗೃತವಾಗಿಡುವುದು

ಸುಲಭವಲ್ಲ. ಆದರೆ ಕಲಿಕೆಯ ಸಫಲತೆಗೆ ಅದರ ಅಗತ್ಯ ಹೆಚ್ಚಿದೆ. ಏಕಾಗ್ರತೆಯನ್ನು

ಬೆಳೆಸುವ ಆಟಗಳು ಮತ್ತು ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಅದರಂತೆ

ದೇಹಕ್ಕೂ ವ್ಯಾಯಾಮ ಮಾಡುವುದು ಉತ್ತಮ.

ಧನಾತ್ಮಕತೆ ನಮ್ಮೊಳಗಿರಲಿ: ಯಾವ ವಿದ್ಯಾರ್ಥಿ ಹೆಚ್ಚು ಧನಾತ್ಮಕವಾಗಿ ಯೋಚಿಸಿ

ನಡೆಯುತ್ತಾನೆ ಅವನು ಖಂಡಿತವಾಗಿ ಜಯದತ್ತ ಸಾಗುತ್ತಾನೆ. ನಾನು ಯಶ ಗಳಿಸಲಾರೆ ಎಂಬ

ನಕಾರಾತ್ಮಕ ಅಂಶಗಳೇ ನಮ್ಮನ್ನು ಕಾಲೆಳೆಯುತ್ತವೆ. ಧನಾತ್ಮಕವಾಗಿ ಚಿಂತಿಸುತ್ತಾ

ನನ್ನಿಂದ ಇದು ಸಾಧ್ಯವಿದೆ ಎಂದು ಮುನ್ನುಗ್ಗಿ ಯಶ ಕಂಡಲ್ಲಿ ಮತ್ತೆ ಹಿಂತಿರುಗಿ ನೋಡುವ

ಪ್ರಮೇಯವೇ ಬರುವುದಿಲ್ಲ.

ಕಲಿಕೆಗೆ ವಿನೂತನ ಹಾದಿಯನ್ನು ತೋರಿಸಿದ ಅರವಿಂದ ಗುಪ್ತ ಅವರು ಸಹಸ್ರಾರು ಅಪರೂಪದ

ಅತ್ಯುಪಯುಕ್ತ ಪುಸ್ತಕಗಳನ್ನು, ಆಟಿಕೆಗಳನ್ನು, ಚಲನಚಿತ್ರಗಳನ್ನು ತಮ್ಮ ಅಂತರ್ಜಾಲ

ತಾಣದಲ್ಲಿ (ಸಂದರ್ಶಿಸಿ- www.arvindguptatoys.com ) ಪ್ರದರ್ಶಿಸಿ ಉಚಿತವಾಗಿ

ಪಡೆಯುವಂತೆ ಮಾಡಿದ್ದಾರೆ. ಇಂತಹವುಗಳನ್ನು ಗಮನಿಸಿ ಆ ನಿಟ್ಟಿನಲ್ಲಿ ಪಯಣಿಸಿದರೆ

ಸುಂದರ ಭವಿಷ್ಯವನ್ನು ಕಾಣಬಹುದು.