Monday, June 24, 2013

ಎಲ್ಲಿ ಹೋದ್ರು ನಮ್ಮ ಮೇಸ್ಟ್ರು ಲೇಖನ ಈ ದಿನದ (24/6/13)ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ


ಎಲ್ಲಿ ಹೋದ್ರು? ನಮ್ಮ ಮೇಷ್ಟ್ರು!

                     

ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಮಕ್ಕಳ ಬದುಕು ಮತ್ತೆ ಹಿಂದಿನಂತೆ ಶಾಲೆ, ಪಾಠ, ಓದು-ಬರಹ, ಟ್ಯೂಷನ್, ಹೋಂವರ್ಕ್‌ನತ್ತ ವಾಲತೊಡಗಿದೆ. ಆದರೆ ಮಕ್ಕಳ ಭವಿಷ್ಯ ಅರಳಿಸುವ ಶಿಕ್ಷಕರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಿಕ್ಷಕರ ಕುರಿತ ನಮ್ಮ ನಿರ್ಲಕ್ಷ್ಯದಿಂದಾಗಿ, ಅವರ ಸಂಖ್ಯೆ ಹೆಚ್ಚಾದರೂ, ಮಕ್ಕಳಿಗೆ ನಿಜವಾದ ತಂದೆ, ತಾಯಿ, ಗುರುವಾಗಿ ಮಾರ್ಗದರ್ಶನ ನೀಡುವಂಥ ಉತ್ತಮ ಶಿಕ್ಷಕರು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದ್ದಾರೆ. 
ಒಂದು ಕ್ಷಣ ಕಣ್ಣು ಮುಚ್ಚಿ ನಮ್ಮ ಬಾಲ್ಯದ ಅಥವಾ ಅದಕ್ಕಿಂತ ಹಿಂದಿನ ದಿನಗಳ ಶಿಕ್ಷಕರನ್ನು ನೆನೆಸಿಕೊಂಡರೆ ಮನಸ್ಸು ಪುಳಕಗೊಳ್ಳುತ್ತದೆ. ಅಂದು ಯಾವುದೇ ಸೌಲಭ್ಯಗಳಿಲ್ಲದೆ, ಗುಡಿಗಳಲ್ಲಿ ನಡೆಯುತ್ತಿದ್ದ ಶಾಲೆ, ಸೂಕ್ತ ಸಂಬಳ- ಸೌಕರ್ಯಗಳು ಇಲ್ಲದಿದ್ದರೂ ಗ್ರಾಮದವರು ನೀಡುತ್ತಿದ್ದ ಕಾಳು ಕಡ್ಡಿಗಳಿಂದಲೇ ಸಂತೃಪ್ತರಾಗಿ, ಮಕ್ಕಳ ಬದುಕನ್ನು ಹಸನುಗೊಳಿಸುತ್ತಿದ್ದ ಅಧ್ಯಾಪಕರು, ಗ್ರಾಮದ ಹಿರಿಯರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಅವರ ನಡೆ-ನುಡಿ ಒಂದೇ ಆಗಿತ್ತಲ್ಲದೆ ಸ್ವಾರ್ಥಕ್ಕೆ ಆಸೆ ಪಡದೆ, ಪ್ರಚಾರಕ್ಕೆ ಹಂಬಲಿಸದೆ ಬದುಕಿದ ರೀತಿಗೆ ಸರ್ವರೂ ವಿನಮ್ರರಾಗಿ ಅವರಿಗೆ ನೀಡುತ್ತಿದ್ದ ಗೌರವ ಕಣ್ಣಮುಂದೆ ಸಾಗಿ ಹೋಗುತ್ತವೆ.
ಆ ಮೇಷ್ಟ್ರುಗಳು ತಮ್ಮನ್ನು ಸಂಪೂರ್ಣವಾಗಿ ಗ್ರಾಮಕ್ಕೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಅರ್ಪಿಸಿಕೊಳ್ಳುತ್ತಿದ್ದರು. ಬಡ ಮಕ್ಕಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದರು. ಮಕ್ಕಳ ಸಂಖ್ಯೆ ಹೆಚ್ಚಾದರೆ ಅವರಿಗಾಗಿ ಆಹಾರ- ದಿನಸಿ- ತರಕಾರಿ- ಪೈಸೆಯನ್ನು ಭಿಕ್ಷೆ ಬೇಡಿ ತಂದು ಓದಿಸಿದ ಸಾಕಷ್ಟು ಉದಾಹರಣೆಗಳು ಆತ್ಮಕಥೆಗಳಲ್ಲಿ ದಾಖಲಾಗಿವೆ. ಶಿಕ್ಷಕರು ತಮ್ಮ ವೃತ್ತಿ ಬಗ್ಗೆ ಹೊಂದಿದ್ದ ಅಪಾರ ಗೌರವವೇ ಅವರನ್ನು ಇತರರು ಗೌರವಿಸುವಂತೆ ಇತ್ತು. ಆದರೆ ಇಂದಿನ ಶಿಕ್ಷಕರಿಗೂ ಆ ಮೇಷ್ಟ್ರಿಗೂ ಅಜಗಜಾಂತರ ವ್ಯತ್ಯಾಸ. ಇಂದು ಶಾಲೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿವೆ. ಶಿಕ್ಷಕರಿಗೆ ಉತ್ತಮ ವೇತನ ದೊರೆಯುತ್ತಿದ್ದರೂ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತಿದೆ. `ಶಿಕ್ಷಕ ಗೌರವ ಸಿಗಬೇಕೆಂದು ಬಯಸುವುದಾದರೆ ಆತ ಗೌರವಕ್ಕೆ ಅರ್ಹನಾಗಿರಬೇಕು' ಎಂಬ ಅರವಿಂದ ಘೋಷ್ ಅವರ ಮಾತು ಇಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ. ಏಕೆಂದರೆ ಇತ್ತೀಚೆಗೆ ರಾಷ್ಟ್ರೀಯ ದಿನಪತ್ರಿಕೆ ಯೊಂದು ಸಮೀಕ್ಷಾ ವರದಿಯನ್ನು ಪ್ರಕಟಿಸಿತು. ಅದರ ಪ್ರಕಾರ, ಪ್ರಸ್ತುತ ಶಿಕ್ಷಕ ವೃತ್ತಿಗೆ ಬಂದಿರುವ ಶೇ 83ರಷ್ಟು ಮಂದಿಗೆ ತಮ್ಮ ಕಾಯಕದ ಬಗ್ಗೆ ಗೌರವವೇ ಇಲ್ಲ ಎಂಬ ಆಘಾತಕಾರಿ ಅಂಶ ಅದರಿಂದ ಹೊರಬಿದ್ದಿದೆ. ಹಾಗಾದರೆ ಇದರ ಪರಿಣಾಮ?
ಅಂದಿನ ಮೇಷ್ಟ್ರುಗಳು ಇಂದಿಗೂ ನಮಗೆ ಮಾದರಿಯಾಗಿದ್ದಾರೆ ಎಂದರೆ ಅದಕ್ಕೆ ಒಂದೆರಡು ಕಾರಣಗಳಿಲ್ಲ. ಅತ್ಯಂತ ಶಿಸ್ತುಬದ್ಧವಾಗಿ ನಡೆಸಿದ ಜೀವನ ಶೈಲಿ, ದಕ್ಷತೆಯಿಂದ ಮಕ್ಕಳಿಗೆ ಕಲಿಸುತ್ತಿದ್ದ ರೀತಿ, ತಮ್ಮ ಧ್ಯೇಯಗಳಿಗೆ ವಿರುದ್ಧವಾಗಿ ಯಾವುದೇ ರಾಜಿಗೆ ಅವಕಾಶ ನೀಡದಿರುವುದು, ಯಾವುದೇ ಹಿನ್ನೆಲೆಯ ಮಗುವಾಗಿದ್ದರೂ ಸಮಾನವಾಗಿ ಕಾಣುತ್ತಿದ್ದ ದೃಷ್ಟಿಕೋನ, ಜೀವನದ ಪ್ರತಿ ನಡೆಯಲ್ಲೂ ಪಾವಿತ್ರ್ಯ ಕಾಪಾಡಿಕೊಳ್ಳುವುದು... ಇಂತಹ ಸೂಕ್ಷ್ಮ ಅಂಶಗಳು ಇದ್ದುದರಿಂದ ಅವರ ಮೇಲೆ ಮಕ್ಕಳಿಗೆ ಸಹಜವಾಗಿಯೇ ಪೂಜ್ಯ ಭಾವನೆ ಇಮ್ಮಡಿಗೊಳ್ಳುತ್ತಿತ್ತು.
ತರಗತಿ ಬೋಧನೆಯಲ್ಲಿ ಅವರು ತೊಡಗಿಕೊಂಡಾಗ ಎಲ್ಲ ವಿಷಯಗಳೂ ಕರತಲಾಮಲಕ ಆಗಿರುತ್ತಿದ್ದವು. ಅದಕ್ಕಾಗಿ ಹೆಚ್ಚಿನ ಕಾಲ ಅಧ್ಯಯನ ಮಾಡುತ್ತಾ ಪೂರ್ವ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಬೋಧನೆ ಯನ್ನು ವಿಶೇಷವಾಗಿ ಪರಿಗಣಿಸುತ್ತಿದ್ದರು. ಸಾಮಾನ್ಯವಾಗಿ ಅವರೆಲ್ಲರಲ್ಲೂ ಇದ್ದ ಬಹು ದೊಡ್ಡ ಹವ್ಯಾಸವೆಂದರೆ ಪುಸ್ತಕಗಳನ್ನು ಓದುವುದು. ಪಠ್ಯಕ್ಕೆ ಪೂರಕ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಆಸಕ್ತರಾಗಿದ್ದರು. ಅದರಲ್ಲೂ ಹಳಗನ್ನಡ ಪದ್ಯಗಳನ್ನು ಪಟಪಟನೆ ಹೇಳುತ್ತಿದ್ದ ಶೈಲಿ ಇಂದಿಗೂ ನನ್ನ ಮನದಲ್ಲಿ ಮನೆ ಮಾಡಿದೆ. ಹೆಚ್ಚು ಹೆಚ್ಚು ಓದಿಕೊಂಡು ಹೊಸ ಜ್ಞಾನಭಂಡಾರದ ಒಡೆಯರಾಗಿದ್ದರು. ಅದನ್ನು ಸಾಂದರ್ಭಿಕವಾಗಿ ಬೋಧನೆಯಲ್ಲಿ ಬಳಸಿಕೊಂಡು ಮಕ್ಕಳಿಗೂ ಸಾಹಿತ್ಯದ ರುಚಿ ಹತ್ತಿಸುತ್ತಿದ್ದರು. ಓದಿನಿಂದ ಸಿಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಮಕ್ಕಳು ಮನಗಾಣುವಂತೆ ಮಾಡುತ್ತಿದ್ದರು. ಈ ತರಹ ನಾನಾ ಮಜಲುಗಳಿಂದ ಮಾಹಿತಿ ಸಂಗ್ರಹಿಸಿ ವಿಷಯಗಳ ಮೇಲೆ ಪ್ರಭುತ್ವ ಪಡೆದು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದರು.
ಶಾಲಾ ಸಮಯದಲ್ಲಿ ಇತರ ಕೆಲಸ ಮಾಡಲು ಅವರು ಎಂದೂ ಯೋಚಿಸುತ್ತಿರಲಿಲ್ಲ. ಶಾಲಾ ಸಮಯ ಅಮೂಲ್ಯ ಎಂದರಿತು ಅದರ ಗರಿಷ್ಠ ಅನುಕೂಲ ಮಕ್ಕಳಿಗೆ ಸಿಗಲು ಶ್ರಮಿಸುತ್ತಿದ್ದರು. ಶಾಲೆ ತಪ್ಪಿಸುವುದು ಅಥವಾ ಆರ್ಥಿಕ ಲಾಭದ ಕೆಲಸಗಳಿಗೆ ಯಾವತ್ತೂ ಅವರು ಮನಸ್ಸು ಮಾಡಲಿಲ್ಲ. ಪ್ರತಿದಿನ ಹಾಜರಾಗಿ ಬೋಧಿಸಿದಾಗ ಮಾತ್ರ, ಮಗು ಶಾಲೆ ಬಿಡಲು ಮುಂದಾದರೆ ಅದನ್ನು ತಡೆಯುವ ನೈತಿಕ ಹಕ್ಕು ನನಗೆ ಬರುತ್ತದೆ ಎಂಬುದನ್ನು ಅರಿತಿದ್ದರು. ಅದನ್ನು ಅಕ್ಷರಶಃ ಪಾಲಿಸುತ್ತಿದ್ದರು.
ಆದರೆ ಈಗಿನ ಶಿಕ್ಷಕರು ಈ ಎಲ್ಲ ಕೆಲಸಗಳನ್ನೂ ಮಾಡುತ್ತಿಲ್ಲವೇ ಎಂದು ಕೇಳಿದರೆ ಉತ್ತರ ಬಹುತೇಕ `ಇಲ್ಲ' ಎಂದೇ ಆಗಿರುತ್ತದೆ. ಯಾಕೆಂದರೆ ನಮ್ಮ ಶಿಕ್ಷಕರಿಗೆ ಸಮಯವೇ ಸಿಗುತ್ತಿಲ್ಲ. ಅವರು ವಿಪರೀತ ಕೆಲಸದ ಒತ್ತಡದಿಂದ ಕಂಗಾಲಾಗಿದ್ದಾರೆ. ಸರಿಯಾಗಿ ಪಾಠ ಮಾಡಲೂ ಬಿಡುವು ಸಿಗದೆ ಒದ್ದಾಡುತ್ತಿದ್ದಾರೆ. ಪಾಠದ ಹೊರತಾಗಿ ಇತರ ಎಲ್ಲ ಕೆಲಸಗಳನ್ನೂ ಅವರ ತಲೆಗೆ ಕಟ್ಟಲಾಗುತ್ತಿದೆ. ದಾಖಲೆ ನಿರ್ವಹಣೆಯೇ ಅವರ ಪ್ರಮುಖ ಕಾರ್ಯವಾಗಿದೆ. ಸಮಾಜದಲ್ಲಿ ಮೊದಲೇ ವೃತ್ತಿಗೌರವ ಕಡಿಮೆ ಆಗುತ್ತಿರುವಾಗ ಈ ತೆರನಾದ ವ್ಯವಸ್ಥೆಯಿಂದ ಶಿಕ್ಷಕರು ಮತ್ತಷ್ಟು ಕುಗ್ಗಿ ಹೋಗಿದ್ದಾರೆ. ಕೆಲವೇ ಶಿಕ್ಷಕರು ಸಮಯ ಹೊಂದಾಣಿಕೆ ಮಾಡಿಕೊಂಡು, ದಾಖಲೆ ನಿರ್ವಹಣೆ ಜೊತೆಗೆ ಉತ್ತಮ ಬೋಧನಾ ಕಾರ್ಯ ಕೈಗೊಳ್ಳುತ್ತಾ, ಜಡ್ಡುಗಟ್ಟಿದ ವ್ಯವಸ್ಥೆಯನ್ನು ಮೀರಿ ಉತ್ತಮ ಶಿಕ್ಷಕರು ಎನಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಣದ ಹಿಂದೆ ಹೋಗಿ ಶಾಲೆಗಿಂತ ಮನೆ ಪಾಠಕ್ಕೆ ಆದ್ಯತೆ ನೀಡುತ್ತಿರುವುದು ಗುಟ್ಟೇನಲ್ಲ. ಉಳಿದವರು, ನಮಗ್ಯಾಕೆ ಇಲ್ಲದ ಉಸಾಬರಿ ಎಂದು ದಿನ ನೂಕುತ್ತಿದ್ದಾರೆ. ಆ ಶಿಕ್ಷಕರಿಗೆ ಸಾಧ್ಯವಾಗುವುದಾದರೆ ಉಳಿದವರಿಗೇಕೆ ಅಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಶಿಕ್ಷಕರು ಇಂದು ಬೋಧನೆ- ಕಲಿಕಾ ಪ್ರಕ್ರಿಯೆಗಳಿಗಿಂತ ಬೇರೆ ಚಟುವಟಿಕೆಗಳತ್ತ ಹೆಚ್ಚು ಆಸಕ್ತರಾಗಿದ್ದಾರೆ ಎಂಬ ದೂರಿದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತನ್ನ ಕೆನ್ನಾಲಿಗೆ ಚಾಚುತ್ತಿರುವುದು. ಶಿಕ್ಷಕರು ತಮಗೆ ಸಿಗಬೇಕಾದ ಸೌಲಭ್ಯ ಪಡೆಯಲು, ಅದರಲ್ಲೂ ಕೆಲವೆಡೆ ವೇತನಕ್ಕಾಗಿ ಸಾಮಾನ್ಯ ಗುಮಾಸ್ತನಿಂದ ಎಲ್ಲರ ಕೈ ಬೆಚ್ಚಗೆ ಮಾಡಬೇಕು. ಇಲ್ಲದಿದ್ದರೆ ಕೆಲಸ ಆಗುವುದಿಲ್ಲ. ಉನ್ನತ ಹಂತದ ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಏನೂ ಮಾಡಲಾರದಂತಹ ಸ್ಥಿತಿ. ಶಿಕ್ಷಕರು ಸಂಬಳದಿಂದಲೇ ತಮ್ಮ ಬದುಕು ಸಾಗಿಸಬೇಕು. ಹಾಗಾಗಿ ಅವರು ಇತರ ಆದಾಯದ ಮೂಲಗಳತ್ತ ಸಾಗುವಂತಾಗಿದೆ. ಇದನ್ನು ಕೆಲ ಶಿಕ್ಷಕರು ಅಸ್ತ್ರವಾಗಿಸಿಕೊಂಡು ತಮ್ಮ ಶಿಕ್ಷಕ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿ, ಇತರ ಆದಾಯದ ಕೆಲಸಗಳನ್ನೇ ಪ್ರಮುಖವಾಗಿಸಿಕೊಂಡಿದ್ದಾರೆ. 
ಇವರೆಲ್ಲರೂ ನಮ್ಮ ಹಿಂದಿನ ದಿನಗಳ ಮೇಷ್ಟ್ರುಗಳನ್ನ ಒಂದು ಕ್ಷಣ ನೆನಪು ಮಾಡಿಕೊಳ್ಳಬೇಕು. ಬಿಜಾಪುರದ ಇಂಡಿ ಮಾರ್ಗದಲ್ಲಿ ಬರುವ ಅಥರ್ಗಾ ಗ್ರಾಮದಲ್ಲಿ `ಶ್ರೀ ರೇವಣಸಿದ್ಧಪ್ಪ ಮಾಸ್ತರ'ರಿಗೆ ದೇವಾಲಯವನ್ನು ನಿರ್ಮಿಸಲಾಗಿದ್ದು, ಪ್ರತಿ ದಿನ ಪೂಜೆ ನಡೆಯುತ್ತದೆ. ಅಲ್ಲದೆ ಪಲ್ಲಕ್ಕಿ ಉತ್ಸವ, ಜಾತ್ರೆ, ಮಾದರಿ ಗ್ರಂಥಾಲಯವನ್ನು ನಡೆಸುತ್ತಿರುವುದು ಈ ರೀತಿ ಉಡಾಫೆಯಾಗಿ ಮಾತನಾಡುವವರಿಗೆ ತಕ್ಕ ಉತ್ತರದಂತಿದೆ.
ಶಿಕ್ಷಕರ ಪ್ರತಿ ನಡೆಯೂ ಬಹು ಮುಖ್ಯ. ಅವರು ತಪ್ಪು ಮಾಡಿದರೆ ಮಕ್ಕಳ ಭವಿಷ್ಯ ಕಮರಲೂ ಬಹುದು. ಪ್ರತಿ ದಿನ ತರಗತಿಯಲ್ಲಿ ನನ್ನ ಮಕ್ಕಳಿಗೆ ನಾನು ನ್ಯಾಯ ಒದಗಿಸುತ್ತಿರುವೆನೇ ಎಂಬ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಡೆದ ಹಾದಿಯ ಸರಿ-ತಪ್ಪುಗಳು ಗಮನಕ್ಕೆ ಬಾರದಂತಾಗುತ್ತವೆ. ತಪ್ಪುಗಳನ್ನು  ಗುರುತಿಸಿಕೊಂಡು ಸಕಾರಾತ್ಮಕವಾಗಿ ಚಿಂತಿಸಿ ಉತ್ತಮ ಗುರಿಯತ್ತ ಪ್ರಾಮಾಣಿಕವಾಗಿ ಮುನ್ನುಗ್ಗಿದರೆ ಶಿಕ್ಷಕರ ಸ್ಥಾನಮಾನದ ಜೊತೆಗೆ ಬೋಧನೆಯೂ ಉನ್ನತ ಮಟ್ಟಕ್ಕೆ ಏರುತ್ತದೆ. ಇದನ್ನೇ ಮಕ್ಕಳು, ಪೋಷಕರು, ಸಮಾಜ ಅವರಿಂದ ಆಶಿಸುತ್ತಿದೆ.
ರವೀಂದ್ರನಾಥ ಟ್ಯಾಗೋರ್, ಡಾ. ಎಸ್.ರಾಧಾಕೃಷ್ಣನ್, ಡಾ. ಎಚ್. ನರಸಿಂಹಯ್ಯ, ರಾಜರತ್ನಂ, ದ.ರಾ.ಬೇಂದ್ರೆ, ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಪಂಜೆ ಮಂಗೇಶರಾಯ, ಕೃಷ್ಣಮೂರ್ತಿ ಪುರಾಣಿಕ್, ತಮ್ಮಣ್ಣ ಮಾಸ್ತರ್, ಬೆಳಗೆರೆ ಕೃಷ್ಣಶಾಸ್ತ್ರಿ, ಎಂ.ಆರ್.ಎನ್., ಎನ್. ಕಾಳೇಶ್ವರ ರಾವ್, ಡಾ. ಎನ್.ಗಣನಾಥ, ಜಿ.ಎಸ್.ಜಯದೇವ್ ಮುಂತಾದವರೆಲ್ಲರೂ ಮಕ್ಕಳ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಕೋಟಿ ಕೊಟ್ಟರೂ ದೊರೆಯುವುದಿಲ್ಲ. ಇವರೆಲ್ಲರೂ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಸಿದರು, ವಿಷಯಗಳನ್ನು ಆರಾಧಿಸಿದರು, ವೃತ್ತಿಯನ್ನು ಎತ್ತರಕ್ಕೆ ಕೊಂಡೊಯ್ದರು. ಹಾಗಾಗಿ ಮಕ್ಕಳ ಬಾಳಿಗೆ ಬೆಳಕಾದರು.