Sunday, August 4, 2013

ಪ್ರಜಾವಾಣಿ ಪತ್ರಿಕೆಲ್ಲಿ (5/8/13)ರಾಜ್ಯ ಗಣಿತ & ವಿಜ್ಞಾನ ಒಲಂಪಿಯಾಡ್ ಕುರಿತ ಲೇಖನ



ರಾಜ್ಯ ಒಲಂಪಿಯಾಡ್ ಸಿದ್ಧರಾಗೋಣ

ಮಕ್ಕಳಿಗೆ ಗಣಿತ- ವಿಜ್ಞಾನ ವಿಷಯಗಳು ಹೆಚ್ಚು ಪ್ರಿಯವಾಗಬೇಕು ಎಂಬ ಅಭಿಲಾಷೆ ನಿನ್ನೆ ಮೊನ್ನೆಯದಲ್ಲ. ಅದಕ್ಕಾಗಿ ಸರ್ಕಾರ, ಶಿಕ್ಷಣ ಇಲಾಖೆ, ಸಂಘ- ಸಂಸ್ಥೆಗಳು, ತಜ್ಞರು ಹಾಗೂ ಶಿಕ್ಷಕರು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಲೇ ಇರುತ್ತಾರೆ. ಕ್ಲಿಷ್ಟ ಅಂಶಗಳನ್ನು ಸರಳವಾಗಿ ಮನನ ಮಾಡಿಸಲು ಮತ್ತು ಪ್ರಾತ್ಯಕ್ಷಿಕೆ ಒದಗಿಸಲು ವಿಜ್ಞಾನ- ಗಣಿತ ಪ್ರಯೋಗಾಲಯಗಳು, ಮೇಳಗಳು, ಮಾದರಿ ವಸ್ತು ಪ್ರದರ್ಶನಗಳು, ಗೋಷ್ಠಿಗಳು, ಎಜುಸ್ಯಾಟ್ ಪಾಠ... ಹೀಗೆ ಹತ್ತಾರು ವಿನೂತನ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಲೇ ಇವೆ.
ಈ ಪ್ರಯತ್ನಗಳ ನಡುವೆಯೂ ಅನೇಕ ಮಕ್ಕಳಿಗೆ ಇಂದಿಗೂ ಗಣಿತ- ವಿಜ್ಞಾನ ಕಬ್ಬಿಣದ ಕಡಲೆ. ಈ ವಿಷಯಗಳನ್ನು ಇತರ ಸಾಮಾನ್ಯ ವಿಷಯಗಳಂತೆ ಅವರು ಪರಿಗಣಿಸುತ್ತಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ, ದಿನನಿತ್ಯ ತಮ್ಮ ಪರಿಸರದಲ್ಲಿ, ಶಾಲೆಯಲ್ಲಿ, ಮನೆಯಲ್ಲಿ ಎಲ್ಲೆಡೆ ನಡೆಯುವ ಚಟುವಟಿಕೆಗಳ ಹಿಂದಿರುವ ಗಣಿತ- ವಿಜ್ಞಾನದ ರಹಸ್ಯಗಳು ಮಕ್ಕಳಿಗೆ ಸರಿಯಾಗಿ ಮನನವಾಗುತ್ತಿಲ್ಲ. ಇದರಿಂದಾಗಿ ಈ ವಿಷಯಗಳು ಮಕ್ಕಳಿಗೆ, ಅದರಲ್ಲೂ ಪ್ರಾಥಮಿಕ- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯಗಳಾಗುತ್ತಿಲ್ಲ. ಈ ಬೆಳವಣಿಗೆಯಿಂದ ದೇಶದಲ್ಲಿ ಗಣಿತ- ವಿಜ್ಞಾನ ಪದವೀಧರರು ಹಾಗೂ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ರಾಜ್ಯ ಶಿಕ್ಷಣ ಇಲಾಖೆ ಇಂತಹ ಅನೇಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಅದಕ್ಕಾಗಿ ಈ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಒಲಂಪಿಯಾಡ್ ಪರೀಕ್ಷೆ ಆಯೋಜಿಸುತ್ತಿದೆ.
ಏನಿದು ಒಲಂಪಿಯಾಡ್?
ನಮ್ಮ ಮಕ್ಕಳಲ್ಲಿ ಅನೇಕ ಬಗೆಯ ಪ್ರತಿಭೆ ಇರುತ್ತದೆ. ಸರಿಯಾದ ಪ್ರೋತ್ಸಾಹ ಸಿಗದೆ ಅಂತಹ ಬಹುತೇಕ ಪ್ರತಿಭೆಗಳು ಕಮರಿ ಹೋಗುತ್ತವೆ. ಅದರಲ್ಲೂ ವಿಜ್ಞಾನ- ಗಣಿತ ವಿಷಯಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಹಾಗಾಗಿ ಈ ವಿಷಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡುವುದು ಈ ಒಲಂಪಿಯಾಡ್‌ನ ಪ್ರಮುಖ ಉದ್ದೇಶ. ಅದಕ್ಕಾಗಿ ಈ ವರ್ಷ 6 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕನ್ನಡ- ಇಂಗ್ಲಿಷ್ ಎರಡೂ ಮಾಧ್ಯಮಗಳ ಮಕ್ಕಳು ಭಾಗವಹಿಸಬಹುದು. ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರಲಿದೆ.
ಸ್ಪರ್ಧೆಯ ಹಂತ
ಶಾಲೆ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ನಾಲ್ಕು ಬಗೆಗಳಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.
ಶಾಲಾ ಹಂತದಲ್ಲಿ ಆಯಾ ಶಾಲೆಯ 6 ಮತ್ತು 9ನೇ ತರಗತಿಯ ಎಲ್ಲ ಮಕ್ಕಳೂ ಪರೀಕ್ಷೆಯಲ್ಲಿ ಭಾಗವಹಿಸಬಹುದು. ರಾಜ್ಯದಾದ್ಯಂತ ಆಗಸ್ಟ್ 31ರಂದು ಏಕಕಾಲಕ್ಕೆ ಶಾಲಾ ಹಂತದ ಪರೀಕ್ಷೆ ನಡೆಯಲಿದೆ. ಉತ್ತರ ಪತ್ರಿಕೆಗಳನ್ನು ಶಾಲಾ ಹಂತದಲ್ಲೇ ಮೌಲ್ಯಮಾಪನ ಮಾಡಿ ಸೆಪ್ಟೆಂಬರ್ 4ರೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶೇ 5ರಷ್ಟು ಮಕ್ಕಳು ತಾಲ್ಲೂಕು ಹಂತಕ್ಕೆ ಅರ್ಹರಾಗುತ್ತಾರೆ. ಶಾಲಾ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಶಾಲೆಯವರೇ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರಮಾಣಪತ್ರ ವಿತರಣೆ ಮಾಡುತ್ತಾರೆ. ತಾಲ್ಲೂಕು ಹಂತದಲ್ಲಿ ಎಲ್ಲ ಶಾಲೆಗಳಿಂದ ಹೆಚ್ಚು ಅಂಕ ಗಳಿಸಿ ಆಯ್ಕೆಯಾದ ಮಕ್ಕಳಿಗೆ ಸೆಪ್ಟೆಂಬರ್ 21ರಂದು ರಾಜ್ಯದೆಲ್ಲೆಡೆ ಒಂದೇ ಸಮಯಕ್ಕೆ ಪರೀಕ್ಷೆ ನಡೆಯಲಿದೆ. ಈ ಫಲಿತಾಂಶವನ್ನು ಸೆ. 25ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ (http://www.schooleducation.kar.nic.in) ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಉನ್ನತ ಸ್ಥಾನ ಪಡೆದ ಶೇ 5ರಷ್ಟು ಮಕ್ಕಳು ಜಿಲ್ಲಾ ಹಂತಕ್ಕೆ ಪ್ರವೇಶ ಪಡೆಯುತ್ತಾರೆ. ಬ್ಲಾಕ್ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಆಯಾ ಶಾಲೆಗಳಲ್ಲಿ ಗಾಂಧಿ ಜಯಂತಿಯಂದು ಶಿಕ್ಷಣ ಇಲಾಖೆ ವತಿಯಿಂದ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಪ್ರತಿ ತಾಲ್ಲೂಕಿನಿಂದ ಆಯ್ಕೆಯಾದ ಮಕ್ಕಳಿಗೆ ನವೆಂಬರ್ 8ರಂದು ಎಲ್ಲ ಜಿಲ್ಲೆಗಳಲ್ಲಿ ಒಂದೇ ಬಾರಿಗೆ ಜಿಲ್ಲಾ ಹಂತದ ಪರೀಕ್ಷೆ ನಡೆಯುತ್ತದೆ. ಇದರ ಫಲಿತಾಂಶ ನವೆಂಬರ್ 13ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಅತಿ ಹೆಚ್ಚು ಅಂಕ ಪಡೆದ ಶೇ 10ರಷ್ಟು ಮಕ್ಕಳು ಅಂತಿಮ ಹಂತವಾದ ರಾಜ್ಯ ಹಂತಕ್ಕೆ ಅರ್ಹರಾಗುತ್ತಾರೆ. ಜಿಲ್ಲಾ ಹಂತದಲ್ಲಿ ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ (ಜನವರಿ 26) ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಲಾಕ್ ಹಂತದ ಕಲಿಕೋತ್ಸವ ದಿನದಂದು ಪ್ರಮಾಣಪತ್ರ ವಿತರಿಸಲಾಗುತ್ತದೆ.
ರಾಜ್ಯ ಹಂತದ ಪರೀಕ್ಷೆಗೆ ಆಯ್ಕೆಯಾದ ಮಕ್ಕಳಿಗೆ ವಿಭಾಗೀಯ ಮಟ್ಟದಲ್ಲಿ ಡಿಸೆಂಬರ್ 13ರಂದು ಪರೀಕ್ಷೆ ನಡೆದು, 20ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯ ಗಣಿತ- ವಿಜ್ಞಾನದ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನದ ಜೊತೆಗೆ ಆ ಶಾಲೆಗೆ ರೋಲಿಂಗ್ ಶೀಲ್ಡ್‌ನ್ನು ಮುಂಬರುವ ಗಣರಾಜ್ಯೋತ್ಸವದಂದು ವಿತರಿಸಲಾಗುತ್ತದೆ.
ಪಠ್ಯವಸ್ತು ಮತ್ತು ಪ್ರಶ್ನೆಪತ್ರಿಕೆ
ರಾಜ್ಯ ಹಂತದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ರಚಿಸಲಾಗುವ ಸಮಿತಿಯು ಒಲಂಪಿಯಾಡ್ ಪರೀಕ್ಷೆಗೆ ಪಠ್ಯ ವಸ್ತುವನ್ನು ನಿಗದಿಪಡಿಸಲಿದೆ. ಸಾಮಾನ್ಯವಾಗಿ 6ನೇ ತರಗತಿಗೆ 1ರಿಂದ 5ನೇ ತರಗತಿ ಪಠ್ಯವಸ್ತು, 9ನೇ ತರಗತಿಗೆ 8ನೇ ತರಗತಿವರೆಗಿನ ಪಠ್ಯವಸ್ತುವನ್ನು ಪರಿಗಣಿಸಬಹುದು. ಶಾಲಾ ಹಂತದ ಪರೀಕ್ಷೆಗೆ ಆಯಾ ಶಾಲಾ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸಮಿತಿಯು ಜುಲೈ 31ರೊಳಗೆ ಪಠ್ಯವಸ್ತು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ರಾಜ್ಯ ಹಂತದ ಸಮಿತಿಯು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ, ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಪರೀಕ್ಷೆ ನಡೆಸುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ 50 ಪ್ರಶ್ನೆಗಳು ಇರುತ್ತವೆ. 50 ಅಂಕಗಳ ವಸ್ತುನಿಷ್ಠ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗುತ್ತದೆ. ಅದರಲ್ಲಿ `ಪೂರ್ಣಗೊಳಿಸಿ' `ಉತ್ತರ ಆಯ್ಕೆ ಮಾಡಿ' `ಹೊಂದಿಸಿ ಬರೆಯಿರಿ' `ಹೋಲಿಕೆ ಮಾಡಿ' `ಗುಂಪಿಗೆ ಸೇರದ ಪದ' ಇತ್ಯಾದಿ ವಿಧಗಳು ಇರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕ ಇದ್ದು, ಪ್ರತಿ ವಿಷಯದ ಪರೀಕ್ಷೆಗೆ ಒಂದು ಗಂಟೆ ಸಮಯ ನಿಗದಿಪಡಿಸಲಾಗಿದೆ. ಬ್ಲಾಕ್ ಹಂತದಿಂದ ಉತ್ತರ ಪತ್ರಿಕೆಗೆ ಒ.ಎಂ.ಆರ್. ಶೀಟ್ ಬಳಸಲಾಗುತ್ತಿದ್ದು, ಅದರ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ.
ಮಕ್ಕಳೇ, ಈ ಸುಂದರ ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತೀರಿ ತಾನೇ? ಹಾಗಾದರೆ ತಡವೇಕೆ? ಒಲಂಪಿಯಾಡ್‌ಗೆ ಸಿದ್ಧರಾಗೋಣ ಬನ್ನಿ.
ಹೆಚ್ಚಿನ ಮಾಹಿತಿಗೆ ಹತ್ತಿರದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಥವಾ  http://ssakarnataka.gov.in/ ಅಥವಾhttp://www.schooleducation.kar.nic.in/
ಇತರ ಒಲಂಪಿಯಾಡ್
1959ರಲ್ಲಿ ರೊಮೇನಿಯಾದಲ್ಲಿ ಆರಂಭವಾಗಿರುವ, ಪ್ರತಿ ವರ್ಷ ಜುಲೈನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಏರ್ಪಡಿಸಲಾಗುತ್ತಿರುವ ಅಂತರ ರಾಷ್ಟ್ರೀಯ ಗಣಿತ ಒಲಂಪಿಯಾಡ್‌ನಲ್ಲಿ ನೂರಕ್ಕೂ ಹೆಚ್ಚು ದೇಶಗಳ ಗಣಿತ ಉತ್ಸಾಹಿಗಳು ಪಾಲ್ಗೊಳ್ಳುತ್ತಿದ್ದಾರೆ.  ಭಾರತದ ರಾಷ್ಟ್ರೀಯ ಗಣಿತ ಒಲಂಪಿಯಾಡ್ ಸ್ಪರ್ಧೆಗಳು 1986ರಿಂದ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಏರ್ಪಾಡಾಗುತ್ತಿವೆ.  ವಿವರಗಳಿಗೆ www.imo-official.org ಅಥವಾhttp://en.wikipedia.org/wiki/indian_national_mathematical_olympiad ಸಂಪರ್ಕಿಸಬಹುದು. ರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್‌ನ್ನು 3ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ನಡೆಸಲಾಗುತ್ತದೆ. ಪ್ರಥಮ ಹಂತದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕನಿಷ್ಠ 50 ಮಕ್ಕಳು ನೋಂದಾಯಿಸಿಕೊಳ್ಳಬೇಕು. ನೋಂದಣಿಗಳನ್ನು ಶಾಲೆಗಳ ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಕಳುಹಿಸಬೇಕಾಗುತ್ತದೆ. ಇದಕ್ಕೆ ಪೂರಕವಾದ ಮಾಹಿತಿ ಕೈಪಿಡಿ ಅಂತರ್ಜಾಲದಲ್ಲಿ ದೊರೆಯುತ್ತದೆ. ಗಮನಿಸಿ http://www.sofworld.org/html2003/htp.shtml.
ಪರೀಕ್ಷೆ ವೇಳಾಪಟ್ಟಿ
ವಿಜ್ಞಾನ (ಸಮಯ) ಬೆಳಿಗ್ಗೆ 10ರಿಂದ 11
ಗಣಿತ (ಸಮಯ) ಮಧ್ಯಾಹ್ನ 12ರಿಂದ 1
ಶಾಲಾ ಹಂತ
   31.8.2013
ತಾಲ್ಲೂಕು ಹಂತ
   21.9.2013
ಜಿಲ್ಲಾ ಹಂತ
   08.11.2013
ರಾಜ್ಯ ಹಂತ
   13.12.2013