Monday, May 9, 2011

ಗೋಡೆ ಪತ್ರಿಕೆ ಲೇಖನ ಪ್ರಜಾವಾಣಿ ಶಿಕ್ಷಣ ಪತ್ರಿಕೆ2/5/2011



ಶಾಲಾ ಗೋಡೆಗೂ ಜೀವಂತಿಕೆ... ಪರಮೇಶ್ವರಯ್ಯ ಸೊಪ್ಪಿಮಠ

ಪುಟ್ಟ ಬೇದ್ರೆ ಸುಮಂತನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ.

‘ಅಂಕಲ್ ನಮ್ಮ ಶಾಲೆಯಲ್ಲಿ ‘ಪ್ರತಿಭೆ’ ಅನ್ನೊ ಗೋಡೆ ಪತ್ರಿಕೆ ಪ್ರಾರಂಭಿಸಿದ್ದೀವಿ’ ಎಂದ
ಅವನು ಹೇಳುವ ಉತ್ಸಾಹ ಕಂಡು ಅದರ ಬಗ್ಗೆ ನನಗೂ ಸ್ವಲ್ಪ ಹೇಳೋ ಎಂದೆ. ‘ಈ ಗೋಡೆ
ಪತ್ರಿಕೆಯನ್ನು ನೊಟೀಸ್ ಬೋರ್ಡ್‌ನ ಪಕ್ಕದ ಒಂದು ಬೋರ್ಡಿನಲ್ಲಿ ಪ್ರಕಟಿಸಿದ್ದಾರೆ.
ಅದು ಎಲ್ಲಾ ಮಕ್ಕಳಿಗೂ ಓದಲು ಸಿಗುವಂತಿದೆ. ಅದಕ್ಕೆ ನಮ್ಮ ಮುಖ್ಯಗುರುಗಳು ಮುಖ್ಯ
ಸಂಪಾದಕರು, ಕನ್ನಡ ಟೀಚರ್ ಸಹ ಸಂಪಾದಕರು, ಮೀನಾ ತಂಡದ ನಾಯಕಿ ಸಂಪಾದಕಿಯಾಗಿ ಆಯ್ಕೆ
ಯಾಗಿದ್ದಾರೆ’ ಎಂದು ವಿವರಿಸಿದ.

ಸರಿ ಅವರೆಲ್ಲಾ ಏನು ಮಾಡ್ತಾರೆ ?
‘ಪ್ರತಿ ತರಗತಿ ಶಿಕ್ಷಕರು ಮತ್ತು ನಾಯಕರು ತಮ್ಮ ತರಗತಿ ವಿದ್ಯಾರ್ಥಿಗಳು ಬರೆದ ಕವನ,
ಕಥೆ, ಚುಟುಕು, ವ್ಯಂಗ್ಯಚಿತ್ರ, ಜೋಕ್, ರಸಪ್ರಶ್ನೆ, ಚಿತ್ರ, ಲೇಖನಗಳನ್ನು
ಸಂಗ್ರಹಿಸಿ ಸಂಪಾದಕಿಗೆ ಕೊಡಬೇಕು. ಸಂಪಾದಕಿಯು ಉಳಿದ ಸಂಪಾದಕ ಮಂಡಳಿ ಜೊತೆ ಚರ್ಚೆ
ಮಾಡಿ ಉತ್ತಮವಾದವನ್ನು ಆಯ್ಕೆ ಮಾಡುತ್ತಾರೆ. ಅವನ್ನು ಅಚ್ಚುಕಟ್ಟಾಗಿ ಡ್ರಾಯಿಂಗ್
ಹಾಳೆಯ ಮೇಲೆ ದುಂಡಾಗಿ ಬರೆವ ವಿದ್ಯಾರ್ಥಿಗಳಿಂದ ಬರೆಸಿ, ಗೋಡೆ ಬರಹದ
‘ಪ್ರತಿಭೆ’ಯಲ್ಲಿ ಪ್ರಕಟಿಸುತ್ತಾರೆ. ಈಗ ಸದ್ಯಕ್ಕೆ ತಿಂಗಳಿಗೆ ಒಂದು ಅಂತ
ನಿರ್ಧರಿಸಲಾಗಿದೆ. ಮುಂದೆ ಹೆಚ್ಚು ಸಂಗ್ರಹವಾದರೆ ಎರಡು ಬಾರಿಯೂ ಪ್ರಕಟಿಸಲಾಗುತ್ತದೆ’
ಎಂದ.

‘ಬಹಳ ಚೆನ್ನಾಗಿದೆ ಕಣೋ’ ಎಂದೆ.

‘ಅಷ್ಟೆ ಅಲ್ಲ ಅಂಕಲ್, ಬಹಳ ಉತ್ತಮವೆನಿಸಿದ ಬರಹಗಳನ್ನು ಅವರೆ ರಾಜ್ಯ ಮಟ್ಟದ

ಪತ್ರಿಕೆಗಳಿಗೆ ಕಳಿಸಿಕೊಡುತ್ತಾರೆ. ಜೊತೆಗೆ ಶಾಲಾ ವಾರ್ಷಿಕ ಸಂಚಿಕೆಗೂ

ಬಳಸಿಕೊಳ್ಳುತ್ತಾರೆ. ಇದರಿಂದ ನಮ್ಮ ಶಾಲೆಯಲ್ಲಿ ಒಂದು ರೀತಿ ಸ್ಪರ್ಧೆ ಏರ್ಪಟ್ಟಿದೆ
ನಾನೂ ಬರೆಯಬೇಕು ಎಂಬ ಉತ್ಸಾಹ ಎಲ್ಲರಲ್ಲೂ ಬಂದಿದೆ. ಅದಕ್ಕೆ ಹೆಚ್ಚು ಹೆಚ್ಚು ಓದಲು

ಪ್ರಾರಂಭಿಸಿದ್ದಾರೆ’ ಎಂದು ಮಾತು ನಿಲ್ಲಿಸಿದ. ಆದರೆ ನನ್ನ ತಲೆಯಲ್ಲಿ ಬರೀ ಅವನ

ಮಾತುಗಳೇ ಸುಳಿಯುತ್ತಿದ್ದವು
ಹೌದು ಈ ಪುಟಾಣಿ ಹೇಳುವಂತೆ ಗೋಡೆ ಪತ್ರಿಕೆಗಳು ಮಕ್ಕಳ ಕಲಿಕಾ ಪ್ರಕ್ರಿಯೆಗೆ ನೆರವು

ನೀಡುವುದಲ್ಲದೆ, ಆ ಗೋಡೆಗಳಿಗೆ ಜೀವಂತಿಕೆಯನ್ನು ತಂದು ಕೊಡುತ್ತವೆ.

ಇಂತಹ ಚಟುವಟಿಕೆಗಳು ನಡೆಯದಿದ್ದರೆ; ನಮ್ಮ ಶಾಲೆಗಳು ಬರೀ ಪಠ್ಯ ಪುಸ್ತಕ,

ಪರೀಕ್ಷೆಗಳಿಗೆ ಸೀಮಿತವಾಗಿ, ನಿಜ ಜೀವನದ ಪರೀಕ್ಷೆಗಳನ್ನು ಎದುರಿಸಲು ಅಸಮರ್ಥವಾಗಿ

ಶಿಕ್ಷಣದ ಅರ್ಥವನ್ನೇ ಕುಬ್ಜಗೊಳಿಸಿಬಿಡುತ್ತವೆ.
ಹಾಗಾಗಿ ಪ್ರಸ್ತುತದಿನದಲ್ಲಿ ಮಕ್ಕಳ ಕಲಿಕಾ ವಿಧಾನ ಮತ್ತು ತರಗತಿಯಲ್ಲಿನ ಬೋಧನಾ

ವಿಧಾನಗಳು ಹೊಸ ಹೊಸ ಹಾದಿಯನ್ನು ತುಳಿಯುವುದು ಅವಶ್ಯವಾಗಿದೆ. ಅಂತಹ ನವನೂತನ

ಹಾದಿಗಳಲ್ಲಿ ಗೋಡೆ ಪತ್ರಿಕೆಗೂ ಮಹತ್ವದ ಸ್ಥಾನವಿದೆ.
ವಿದ್ಯಾರ್ಥಿಗಳು ತಾವು ಓದಿದ-ತಿಳಿದ-ಕೇಳಿದ ಮಾಹಿತಿಯನ್ನು ಅಭಿವ್ಯಕ್ತಿಸಲು, ಭಾಷೆಯ

ಮೇಲಿನ ಹಿಡಿತವನ್ನು ಗಟ್ಟಿಗೊಳಿಸಲು, ಕಂಡುಕೊಂಡ ಜ್ಞಾನವನ್ನು ಪ್ರದರ್ಶಿಸಲು,

ಶಾಲೆಯಲ್ಲಿ ಕಲಿತ ಅಂಶವನ್ನು ಬದುಕಿನಲ್ಲಿ ಅನ್ವಯಮಾಡಿಕೊಳ್ಳುವುದರ ಬಗ್ಗೆ ಚರ್ಚಿಸಲು

ಗೋಡೆ ಪತ್ರಿಕೆ ಅತ್ಯುತ್ತಮ ವೇದಿಕೆಯಾಗಿದೆ. ಮಕ್ಕಳಿಗೆ ತಾವು ಬರೆದಿರುವುದು

ಪ್ರಕಟವಾಗಿರುವುದನ್ನು ನೋಡುವಾಗ ಆಗುವ ಸಂತಸ ಹೇಳತೀರದು. ಅದು ಅವರಲ್ಲಿ ನೂರುಪಟ್ಟು

ಆಸಕ್ತಿಯನ್ನು ಪ್ರೇರೇಪಿಸುತ್ತದೆ. ಆರಂಭದಲ್ಲಿ ಅದು ನಿರೀಕ್ಷಿತ ಮಟ್ಟ

ಮುಟ್ಟುವುದಿಲ್ಲ. }
ಅದಕ್ಕೆ ಶಿಕ್ಷಕರು ನಿರಾಸೆ ತಾಳದೆ, ತಾಳ್ಮೆುಂದ ಮುಂದುವರೆಯಬೇಕು. ಮೊದ ಮೊದಲು ಕೆಲವೇ

ಬುದ್ಧಿವಂತ ಮಕ್ಕಳು ಬರೆದರೆ ಅದನ್ನು ಪ್ರಕಟಿಸುತ್ತಾ, ಉಳಿದ ಮಕ್ಕಳ ಸಾಮರ್ಥ್ಯ

ಗುರುತಿಸಿ ಪ್ರೋತ್ಸಾಹಿಸಿದಲ್ಲಿ, ಅವರೂ ಬವರೆಯುವ ಸಾಮರ್ಥ್ಯ ಪಡೆಯುತ್ತಾರೆ. ನಮ್ಮ

ಶಿಕ್ಷಕರು ಮೊದಲು ಗಮನಿಸಬೇಕಾದ ಅಂಶವೆಂದರೆ ಬರೆಯುವ ಸಾಮರ್ಥ್ಯ ಎಲ್ಲರಲ್ಲೆ ಒಂದೇ

ತೆರನಾಗಿರುವುದಿಲ್ಲ. ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.

ಮಕ್ಕಳಲ್ಲಿ ಬರೆಯುವ ಆಸಕ್ತಿ ಜಾಗೃತವಾದರೆ, ಮುಂದೆ ಶಿಕ್ಷಕರು ಶ್ರಮ ಪಡುವ ಅಗತ್ಯವೇ

ಬೀಳುವುದಿಲ್ಲ.

ಈ ತರಹದ ಚಟುವಟಿಕೆಗಳಿಂದ ಮಕ್ಕಳಲ್ಲಿ ಹೊಸದನ್ನು ಹುಡುಕುವ ಮನೋಭಾವ, ಇತರೆ

ಪುಸ್ತಕಗಳನ್ನು ಓದುವ ಹವ್ಯಾಸ, ಮಹತ್ವದ ಘಟನೆಗಳನ್ನು ಗುರುತಿಸುವಿಕೆ...ಇತ್ಯಾದಿ

ಅನೇಕ ಕೌಶಲ್ಯಗಳು ವೃದ್ಧಿಸುತ್ತವೆ.
ಶಿಕ್ಷಕರು ಗೋಡೆ ಬರಹದಲ್ಲಿ ಪ್ರಕಟವಾದ ಉತ್ತಮ ಬರವಣಿಗೆಗಳನ್ನು ಗುರುತಿಸಿ,

ಸಂಗ್ರಹಿಸಿ ಪ್ರತಿವರ್ಷ ಒಂದು ಮಕ್ಕಳ ಪುಸ್ತಕವನ್ನು ದಾನಿಗಳ ಸಹಾಯದಿಂದ ಪ್ರಕಟಿಸಿದರೆ

ಅದರಿಂದಾಗುವ ಲಾಭ ಲೆಕ್ಕಕ್ಕೆ ಸಿಗದು. ಇದನ್ನು ಮನಗಂಡ ಶಿಕ್ಷಣ ಇಲಾಖೆ ಎಲ್ಲಾ

ಶಾಲೆಗಳಲ್ಲಿ ಮಕ್ಕಳಿಂದ ಗೋಡೆ ಬರಹ ರಚಿಸಿ ಪ್ರದರ್ಶಿಸಬೇಕು ಎಂದು ಆದೇಶಿಸಿರುವುದು

ಉತ್ತಮ ಬೆಳವಣಿಗೆ
ಚಿಣ್ಣರ ಚೇತನ..

ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಅದಮ್ಯ ಚೇತನ ಸಂಸ್ಥೆಯ ಸಹಯೋಗದೊಂದಿಗೆ

ರಾಜ್ಯದ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಚಿಣ್ಣರ ಚೇತನ ಮಾಸಿಕ ಗೋಡೆ

ಪತ್ರಿಕೆಯನ್ನು ವಿತರಿಸಲಾಗುತ್ತಿದೆ. 2009ರ ಆಗಸ್ಟ್ ತಿಂಗಳಿಂದ ರಚಿಸಲ್ಪಡುತ್ತಿರುವ

ಈ ಪತ್ರಿಕೆ ಮಕ್ಕಳ ಹಾಗೂ ಶಿಕ್ಷಕರ ಮನಸ್ಸನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ
ಈ ಚೇತನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ವೈಜ್ಞಾನಿಕ ಅಂಶಗಳು, ವಿನೋದ ಗಣಿತದ

ಚಟುವಟಿಕೆಗಳು, ಆದರ್ಶ ವ್ಯಕ್ತಿಗಳ ಪರಿಚಯ, ಸಾಧಕರ ಸಾಧನೆಗಳು ಕುರಿತಾದ ಅಂಶಗಳು

ತುಂಬಿರುತ್ತವೆ. ಜೊತೆಗೆ ಇದು ನಾಲ್ಕು ಬಣ್ಣಗಳಲ್ಲಿ, ದೊಡ್ಡ ದೊಡ್ಡ ಅಕ್ಷರಗಳಲ್ಲಿ

ಬರುತ್ತಿರುವುದರಿಂದ ಮಕ್ಕಳ ಮನಸ್ಸಿಗೆ ಮುದನೀಡುತ್ತಿದೆ. ಸರಳವಾಗಿ ಅರ್ಥವಾಗುವಂತಹ

ಭಾಷೆ ಬಳಸಿದ್ದು, ವಿವಿಧ ರೀತಿಯ ಚೌಕಟ್ಟಿನಲ್ಲಿ, ಬೇರೆ ಬೇರೆ ಚಿತ್ರಗಳನ್ನು ಬಳಸಿ

ಮುದ್ರಿಸುವುದರಿಂದ ಕಣ್ಣಗೆ ಆನಂದ ನೀಡುತ್ತದೆ.
ಶಿಕ್ಷಕರ ಮತ್ತು ಮಕ್ಕಳ ಬರಹಗಳಿಗೂ ಅವಕಾಶ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.

ರಾಜ್ಯದ ಮೂಲೆ ಮೂಲೆಗಳಿಂದ ಈ ಗೋಡೆ ಬರಹಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಚಿಣ್ಣರ ಚೇತನ ಇನ್ನು ಹೆಚ್ಚು ಮಕ್ಕಳನ್ನು ತಲುಪಬೇಕಾದರೆ ಪ್ರತಿ ಶಾಲೆಯಲ್ಲಿ

ಅದಕ್ಕಾಗಿ ಸೂಕ್ತ ಗೋಡೆ/ಬೋರ್ಡ್‌ನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿ

ಪ್ರದರ್ಶನಕ್ಕೆ

ಈ ಚೇತನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ವೈಜ್ಞಾನಿಕ ಅಂಶಗಳು, ವಿನೋದ ಗಣಿತದ

ಚಟುವಟಿಕೆಗಳು, ಆದರ್ಶ ವ್ಯಕ್ತಿಗಳ ಪರಿಚಯ, ಸಾಧಕರ ಸಾಧನೆಗಳು ಕುರಿತಾದ ಅಂಶಗಳು

ತುಂಬಿರುತ್ತವೆ. ಜೊತೆಗೆ ಇದು ನಾಲ್ಕು ಬಣ್ಣಗಳಲ್ಲಿ, ದೊಡ್ಡ ದೊಡ್ಡ ಅಕ್ಷರಗಳಲ್ಲಿ

ಬರುತ್ತಿರುವುದರಿಂದ ಮಕ್ಕಳ ಮನಸ್ಸಿಗೆ ಮುದನೀಡುತ್ತಿದೆ. ಸರಳವಾಗಿ ಅರ್ಥವಾಗುವಂತಹ

ಭಾಷೆ ಬಳಸಿದ್ದು, ವಿವಿಧ ರೀತಿಯ ಚೌಕಟ್ಟಿನಲ್ಲಿ, ಬೇರೆ ಬೇರೆ ಚಿತ್ರಗಳನ್ನು ಬಳಸಿ

ಮುದ್ರಿಸುವುದರಿಂದ ಕಣ್ಣಗೆ ಆನಂದ ನೀಡುತ್ತದೆ.
ಶಿಕ್ಷಕರ ಮತ್ತು ಮಕ್ಕಳ ಬರಹಗಳಿಗೂ ಅವಕಾಶ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.

ರಾಜ್ಯದ ಮೂಲೆ ಮೂಲೆಗಳಿಂದ ಈ ಗೋಡೆ ಬರಹಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಚಿಣ್ಣರ ಚೇತನ ಇನ್ನು ಹೆಚ್ಚು ಮಕ್ಕಳನ್ನು ತಲುಪಬೇಕಾದರೆ ಪ್ರತಿ ಶಾಲೆಯಲ್ಲಿ

ಅದಕ್ಕಾಗಿ ಸೂಕ್ತ ಗೋಡೆ/ಬೋರ್ಡ್‌ನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿ

ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಸಾಧ್ಯವಾದರೆ ಒಂದೊಂದು ದಿನ ಒಂದೊಂದು ತರಗತಿಯಲ್ಲಿ

ಪ್ರದರ್ಶಿಸಬೇಕು. ನಂತರ ಎಲ್ಲಾ ಮಕ್ಕಳಿಗೂ ಸುಲಭವಾಗಿ ಓದಲು ಕ್ಯಗೆಟುಕುವಂತೆ ಸಾಮಾನ್ಯ

ಸ್ಥಳದಲ್ಲಿ ಪ್ರದರ್ಶಿಸಬೇಕು.
ಹೊಸ ಪತ್ರಿಕೆ ಬರುವವರಿಗೂ ಅದು ಬೋರ್ಡಿನಲ್ಲಿ ಪ್ರದರ್ಶನವಾಗುತ್ತಿರಬೇಕು.

ಸಂದರ್ಶಿಸುವ ಅಧಿಕಾರಿಗಳು ಆ ಕುರಿತು ಜಾಗೃತಿ ಮೂಡಿಸಬೇಕು. ಆಗ ಅದು ನಿರೀಕ್ಷಿತ ಫಲ

ಕೊಡುತ್ತದೆ.(ಗಮನಿಸಿ: http://www.schooleducation.kar.nic.in/)

ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವೇಶ್ವರರ ನನ್ನ ಲೇಖನವೊಂದು ದಿ|| 06-05-2011 ರಂದು ಹೊಸದಿಗಂತದಲ್ಲಿ ಬಂದಿದೆ..ನಿಮಗಾಗಿ ಇಲ್ಲಿಯೂ


ಉತ್ತಮ ಆರೋಗ್ಯಕ್ಕೆ ಹತ್ತು ಸೂತ್ರಗಳು ವಿಜಯಕರ್ನಾಟಕದ ಲವಲವಿಕೆಯಲ್ಲಿ ದಿ: 7/5/2011, ಇಲ್ಲಿ ಅದು ನಿಮಗಾಗಿ

Sunday, May 8, 2011

ತಾಯಿಯ ಪಾತ್ರ ಶಿಕ್ಷಕಿಯಾಗಿ ಮಾತ್ರವೇ ? ಈ ಕುರಿತು ಲೇಖನ ಓದಿ (ಪ್ರಜಾವಾಣಿ ಭೂಮಿಕ 7/5/11)

ತಾಯಿ ಮತ್ತು ಶಿಕ್ಷಕಿಯಾಗಿ... ಪರಮೇಶ್ವರಯ್ಯ ಸೊಪ್ಪಿಮಠ

ದಾವಣಗೆರೆಯ ಪ್ರತಿಭಾ ದೂರವಾಣಿಯಲ್ಲಿ ಮಾತನಾಡುತ್ತಾ ‘ನನ್ನ

ಮಗ ಪ್ರಜ್ವಲ್‌ನ ಪರೀಕ್ಷೆಯ ಸಮಯದಲ್ಲಿ ಮನೆಯಾಗ ಒಂದು ರೀತಿ ಉದ್ವಿಗ್ನ ವಾತಾವರಣ

ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ನನ್ನ ಮಗನ ಜೊತೆ ನಾನು ಪರೀಕ್ಷೆ

ಬರೆಯುತ್ತಿದ್ದೇನೆ ಎಂಬಷ್ಟು ಒತ್ತಡಕ್ಕೆ ಒಳಗಾಗಿದ್ದೆ’ ಎಂದು ಹೇಳಿದಾಗ, ನನಗೆ ತಾಯಿ

ಮತ್ತು ಶಿಕ್ಷಕಿ ನಡುವಿನ ಅಂತರ ಕುರಿತ ಚಿಂತನೆ ಪ್ರಾರಂಭವಾಯಿತು.
ನಮ್ಮ ಹಿರಿಯರು ‘ಜನನಿ ತಾನೆ ಮೊದಲ ಗುರು’ ಎಂದು ಹೇಳಿದ್ದಾರೆ. ಅದು ಬದುಕಿನ ಪಾಠ

ಕಲಿಕೆಗೆ ಅಗತ್ಯವೂ ಹೌದು. ಆದರೆ ಇಂದಿನ ಶಾಲಾ ಕಲಿಕೆಯ ಬೆನ್ನು ಹತ್ತಿರುವ ನಾವು

ಬದುಕಿನ ಪಾಠಕ್ಕಿಂತ ರ್ಯಾಂಕ್‌ಗೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ. ಅದರಿಂದಾಗಿ

ಅನೇಕರು ಉತ್ತಮ ಶಿಕ್ಷಕಿಯಾಗುತ್ತಾ, ತಮ್ಮ ತಾಯ್ತನದ ಹೊಣೆಗಾರಿಕೆಯಿಂದ

ನುಣುಚಿಕೊಳ್ಳುತ್ತಿದ್ದಾರೆ ಇಲ್ಲವೇ ವಂಚಿತರಾಗುತ್ತಿದ್ದಾರೆ.
ಪ್ರಸ್ತುತ ಸ್ಪರ್ಧಾತ್ಮಕ ಯುಗದ ಶಾಲೆಗಳಲ್ಲಿ ಒಂದು ಪಕ್ಷ ಮಗು ಕಲಿಕೆಯಲ್ಲಿ

ಹಿಂದುಳಿದಿದ್ದರೆ ಮನೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗಬೇಕೆಂದು ಶಾಲೆಗಳು

ಆಶಿಸುತ್ತವೆ. ಅದು ತಪ್ಪೇನಲ್ಲ. ಅಂತಹ ಸನ್ನಿವೇಶದಲ್ಲಿ ಮನೆಯ ವಾತಾವರಣ ಸಂಪೂರ್ಣ

ಬಿಗಡಾಯಿಸುತ್ತದೆ.
ತಾಯಿಯ ದಿನಚರಿಯೆಲ್ಲಾ ಮಗುವಿನ ಕಲಿಕೆ ಮೇಲೆ ಕೇಂದ್ರೀಕೃತವಾಗುತ್ತದೆ. ಈ ಸಮಯದಲ್ಲಿ

ಗಮನಿಸಿ ಅನೇಕ ತಾಯಂದಿರು ತಮ್ಮ ಗೆಳತಿಯರೊಡನೆ ಮಾತನಾಡಲೂ ಇಚ್ಛಿಸುವುದಿಲ್ಲ. ಇದು

ಇಂದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ಘಟನೆಯಂತೆ ಸಾಮಾನ್ಯವಾಗುತ್ತಿದೆ.
ಯಾಕೆಂದರೆ ವರ್ತಮಾನದಲ್ಲಿ ತಾಯಿ ಪರಿಪೂರ್ಣವಾಗಿ ಶಿಕ್ಷಕಿ ಕೆಲಸಮಾಡಲು

ಪ್ರಾರಂಭಿಸಿದ್ದಾಳೆ. ಆಕೆಗೆ ಆಗ ಉಳಿದ ಎಲ್ಲಾ ಕೆಲಸಗಳು ನಗಣ್ಯವಾಗುತ್ತವೆ. ಆದರೆ

ಎಲ್ಲರೂ ಉತ್ತಮ ಶಿಕ್ಷಕಿಯಾಗಲಾರರು ಎಂಬುದು ಇಲ್ಲಿ ಗಮನಿಸಬೇಕು. ಹಾಗಾಗಿ ಒಂದು ಕಡೆ

ಆಕೆ ಉತ್ತಮ ತಾಯಿಯೂ ಆಗುವುದಿಲ್ಲ, ಮತ್ತೊಂದೆಡೆ ಒಳ್ಳೆಯ ಶಿಕ್ಷಕಿಯೂ ಆಗದೆ ಅತಂತ್ರ

ಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಾಳೆ. ಇದು ಮಗುವಿನ ಮೇಲೆ ವ್ಯತಿರಿಕ್ತ

ಪರಿಣಾಮಗಳನ್ನು ಬೀರುತ್ತದೆ.
ಹಿನ್ನೆಲೆ ಗಮನಿಸಿದರೆ

ಕೆಲವು ಸಾರಿ ಅನೇಕ ತಾಯಂದಿರು ತಮ್ಮ ಮಗುವಿನ ಕಲಿಕೆಯಲ್ಲಿ ಒತ್ತಾಯಪೂರ್ವಕವಾಗಿ

ಪಾಲ್ಗೊಳ್ಳುತ್ತಾರೆ. ಅವರಿಗೆ ಕಲಿಸಲು ಆಸಕ್ತಿ ಇರುವುದಿಲ್ಲ.
ಶಾಲೆಯಲ್ಲಿ ಮಗುವಿನ ಕಲಿಕಾ ಹಂತ ಕೆಳಮಟ್ಟದಲ್ಲಿದ್ದಾಗ ಅನ್ಯಮಾರ್ಗವಿಲ್ಲದೆ

ಕಲಿಸುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಅಂತವರು ತಮ್ಮ ಮಗುವಿಗೆ ಉತ್ತಮ

ಶಿಕ್ಷಕಿಯಾಗಲು ಸಾಧ್ಯವಿಲ್ಲ. ಅವರು ಅಸಮಾಧಾನದಿಂದ ಕಲಿಸ ತೊಡಗಿದರೆ ಉದ್ವೇಗ/ಸಿಟ್ಟು

ಹೆಚ್ಚಾಗಿ ಮಗುವನ್ನು ತೆಗಳುವುದು-ಹೊಡೆಯುವುದು ಹೇಳಿಕೊಟ್ಟಿದ್ದಕ್ಕಿಂತ

ಹೆಚ್ಚಾಗಿರುತ್ತವೆ. ಮಗು ಮೊದಲೆ ಕಲಿಕಾ ನ್ಯೂನತೆಯ ಭಯದಲ್ಲಿರುತ್ತದೆ. ಅದರ ಜೊತೆ ಈ

ರೀತಿ ತಾಯಿಯ ವರ್ತನೆ ಮತ್ತಷ್ಟು ಪ್ರಪಾತಕ್ಕೆ ತಳ್ಳಿದಂತಾಗುತ್ತದೆ.
ಮಗುವಿನ ಕಲಿಕಾ ಸಾಮರ್ಥ್ಯ ಹಿಂದುಳಿದಿದೆ ಎಂದರೆ ಸಾಕು ತಾಯಿ ತನ್ನ ಎಲ್ಲಾ

ಇಷ್ಟಗಳನ್ನು ತ್ಯಾಗಮಾಡಿ, ಅನಿವಾರ್ಯವಾಗಿಯಾದರೂ ಕಲಿಕಾ ಪ್ರಕ್ರಿಯೆಯಲ್ಲಿ

ತೊಡಗುತ್ತಾಳೆ. ಇದರಿಂದ ತಾಯಿ ಮಗುವಿನ ಸುಮಧುರ ಬಾಂಧವ್ಯ ನಿಧಾನವಾಗಿ ಕಡಿಮೆಯಾಗಲು

ಕಾರಣವಾಗುತ್ತದೆ. ಅವರಿಬ್ಬರಿಗೂ ಅರಿವಿಗೆ ಬಾರದಂತೆ ಕಲಿಕೆಯಲ್ಲದ ಸಮಯದಲ್ಲೂ

ಸೌಹಾರ್ದತೆ ಕುಂಠಿತವಾಗುತ್ತಿರುತ್ತದೆ.
ಇದು ಮುಂದುವರೆದರೆ ತಾಯಿ ತನ್ನ ಮಗುವಿನ ಜೊತೆಯಾಗಿ ಕುಳಿತುಕೊಂಡು ಮಾತನಾಡಲೂ ಆಗದಂತ

ಪರಿಸ್ಥಿತಿ ನಿರ್ಮಾಣವಾಗಬಹುದು. ಅದರಿಂದ ತಾಯಿ ತನ್ನ ಪ್ರಾಥಮಿಕ ಕರ್ತವ್ಯಗಳನ್ನು

ಯಶಸ್ವಿಯಾಗಿ ಪೂರೈಸಲೂ ಸಾಧ್ಯವಾಗದೇ ಅಸಹಾಯಕಳಾಗುತ್ತಾಳೆ.
ಇಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ ಮಗುವಿನ ಸಂಪೂರ್ಣ ಆರೈಕೆ ತಾಯಿಯ ಮೊದಲ

ಆದ್ಯತೆಯಾಗಿರುತ್ತದೆ. ಮೇಲೆ ತಿಳಿಸಿದ ಸಂದರ್ಭಗಳು ಉಂಟಾದರೆ ತಾಯಿ ಓದಿನೆಡೆಗೆ

ಹೆಚ್ಚು ಗಮನ ನೀಡಲಾರಂಭಿಸುತ್ತಾಳೆ. ಆಗ ಮಗುವಿನ ಆರೋಗ್ಯದ ಕಡೆಗೆ ಹೆಚ್ಚು ಒತ್ತು

ನೀಡಲಾಗುವುದಿಲ್ಲ.
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಹೆಚ್ಚು ವಿದ್ಯೆ ಪಡೆದು ನಾನಾ ಕ್ಷೇತ್ರಗಳಲ್ಲಿ

ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದರಿಂದ ಪಡೆದ ಜ್ಞಾನದ ಫಲವಾಗಿ

ಆಕೆ ಮಗುವಿನ ಕಲಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಉತ್ತಮ

ಶಿಕ್ಷಕಿಯಾಗುತ್ತಿದ್ದಾಳೆ.
ಅದರ ಜೊತೆಜೊತೆಯಲ್ಲಿ ಉತ್ತಮ ತಾಯಿಯಾಗುವುದರಲ್ಲಿ ಹಿಂದೆ ಬೀಳುತ್ತಿದ್ದಾಳೆ.

ಮಗು ಆತಂಕ, ಉದ್ವೇಗ, ನೋವು, ಭಯ, ದುಃಖದ ಸನ್ನಿವೇಶದಲ್ಲಿ ನೇರವಾಗಿ ತಾಯಿಯ

ಮಡಿಲಿನಲ್ಲಿ ಸೇರಿ ಅದರಿಂದ ಮುಕ್ತವಾಗುವ ದಾರಿ ಕಾಣುತ್ತಿತ್ತು. ಆದರೆ ಇಂದು ತಾಯಿ

ಬರಿ ಶಿಕ್ಷಕಿ ಮಾತ್ರ ಆಗುತ್ತಿರುವುದರಿಂದ ಮಗುವಿಗೆ ಬೇರೆ ದಾರಿ ಕಾಣದೆ ಅತಂತ್ರವಾಗಿ

ಒದ್ದಾಡುವಂತಾಗಿದೆ. ಇದರ ದೂರಗಾಮಿ ಪರಿಣಾಮ ಊಹಿಸಲು ಅಸಾಧ್ಯ.
ಕೆಲವು ಕಡೆ ಮಾತ್ರ ಅಪರೂಪ ಎನ್ನಿಸುವಂತೆ ತಾಯಿ ಮತ್ತು ಶಿಕ್ಷಕಿಯಾಗಿ ಎರಡು

ಪಾತ್ರವನ್ನು ಅರ್ಥಪೂರ್ಣವಾಗಿ ನಿಭಾಯಿಸುವ ಮಹಿಳೆಯರನ್ನು ಕಾಣಬಹುದು. ಆದರೆ ಇಂಥವರ

ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದರಿಂದಾಗಿ ಇಂದು ಹೆಚ್ಚಾಗಿ ಶಿಕ್ಷಕಿಯಾದ

ತಾಯಿಯನ್ನು ಕಾಣುವಂತಾಗಿದೆ.
ಕೆಲವು ತಾಯಂದಿರು ಎಕ್ಸ್‌ಲೆಂಟ್ ಎನ್ನುವಷ್ಟರ ಮಟ್ಟಿಗೆ ಮಗುವಿಗೆ ಶಿಕ್ಷಕಿಯಾಗಿ

ಬಿಡುತ್ತಾರೆ. ಅದರಿಂದ ಮಗು ಶಾಲೆಯ ಕಲಿಕಾ ಚಟುವಟಿಕೆಯಲ್ಲಿ ನಿರಾಸಕ್ತಿ

ಬೆಳೆಸಿಕೊಳ್ಳುತ್ತದೆ. ಏಕೆಂದರೆ ಹೇಗಿದ್ದರೂ ತಾಯಿ ಮನೆಯಲ್ಲಿ ಎಲ್ಲವನ್ನೂ

ಹೇಳಿಕೊಡುತ್ತಾಳೆ ಎಂಬ ಭಾವನೆ ಬಂದು, ತಾಯಿಯನ್ನೇ ಸಂಪೂರ್ಣವಾಗಿ

ಅವಲಂಬಿಸಿಬಿಡುತ್ತದೆ.
ಇದು ಕೆಳ ಹಂತದ ತರಗತಿಯಲ್ಲಿ ಯಶಸ್ಸನ್ನು ನೀಡುತ್ತದೆ. ಮುಂದೆ ಸಾಗಿದಂತೆ ಉನ್ನತ

ಹಂತಕ್ಕೆ ಸಾಗಿದಂತೆ ತಾಯಿಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಆಕೆ ಅಸಹಾಯಕಳಾಗುತ್ತಾಳೆ.

ಅಂಥ ಪರಿಸ್ಥಿತಿಯಲ್ಲಿ ಮಗು ಕಲಿಕೆಯಲ್ಲಿ ಸಂಪೂರ್ಣ ವಿಫಲವಾಗುವ ಸಾಧ್ಯತೆ

ಹೆಚ್ಚಿರುತ್ತದೆ. ಹಾಗಾಗಿ ಶಿಕ್ಷಣವು ಮಗುವಿನ ಸ್ವಕಲಿಕೆಯನ್ನು ನೀರೆರೆದು ಬೆಳೆಸಬೇಕೆ

ವಿನಾ ಪರಾವಲಂಬಿಯಾಗುವಂತೆ ಮಾಡಬಾರದು.
ಏನು ಮಾಡಬೇಕು?

ಮಕ್ಕಳಿಗೆ ಕಲಿಸಲು ಆಸಕ್ತಿ ಇಲ್ಲದಿದ್ದರೆ ತೊಡಗಿಕೊಳ್ಳಬೇಡಿ. ಅದಕ್ಕೆ ಬೇರೆ

ಶಿಕ್ಷಕಿಯನ್ನು ನೇಮಕಮಾಡಿಕೊಳ್ಳುವುದು ಉತ್ತಮ. ನೀವು ತಾಯಿ ಮಾತ್ರ ಆಗಿ ನಿಮ್ಮ

ಪಾತ್ರದಲ್ಲಿ ಯಶ ಕಾಣಿರಿ.
ಮಗುವಿನ ಕಲಿಕೆಯಲ್ಲಿ ನಿಮಗೆ ಆಸಕ್ತಿ-ಉತ್ಸಾಹ ಇದ್ದರೆ ಸಂತಸದಿಂದ ತೊಡಗಿಕೊಳ್ಳಿ..

ಆದರೆ ನಿಮ್ಮ ಮಗು ನಿಮ್ಮನ್ನೇ ಸಂಪೂರ್ಣ ಅವಲಂಬಿಸದಂತೆ ಎಚ್ಚರವಹಿಸಬೇಕು. ಅಂದರೆ ಮಗು

ಕಾಲಕ್ರಮೇಣ ಸ್ವಕಲಿಕೆ ಮಾಡುವಂತೆ ಸದಾ ಪ್ರೋತ್ಸಾಹಿಸುತ್ತಿರಿ.
ಕೆಲಸ ನಿರ್ವಹಿಸುತ್ತಿರುವ ಮಹಿಳೆಯಾದರೆ ನೀವು ಪಾದರಸದಂತೆ ಕೆಲಸ

ಮಾಡುತ್ತಿರಬೇಕಾಗುತ್ತದೆ. ಮನೆ ಕೆಲಸ, ಕಚೇರಿ ಕೆಲಸದ ನಂತರ ಮಗುವಿಗೆ ತಾಯಿ,

ಶಿಕ್ಷಕಿಯಾಗಬೇಕಾಗುತ್ತದೆ.
ಇವುಗಳಲ್ಲಿ ಯಶ ಸಾಧಿಸಿದವರನ್ನು ‘ಸೂಪರ್ ವುಮನ್’ ಎನ್ನಬಹುದು. ಆದರೆ ಎಲ್ಲರಿಗೂ ಉದು

ಸಾಧ್ಯವಿಲ್ಲ. ಎರಡು ದೋಣಿಗಳ ಮೇಲೆ ಕಾಲಿಟ್ಟು ಪಯಣಿಸುವ ಸಾಹಸಕ್ಕೆ ಇಳಿಯುವುದು ಬೇಡ.

ನಿಮಗೂ ಕೆಲವು ವ್ಯಾಪ್ತಿಗಳಿವೆ ಎಂಬುದನ್ನು ಮನಗಾಣಿರಿ. ಅದನ್ನು ಮೀರಿ ಮುಂದುವರೆದರೆ

ಯಾವುದರಲ್ಲೂ ಯಶ ಸಿಗದೆ ನಿರಾಶೆ ಮಡುವಿನಲ್ಲಿ ಬೀಳುತ್ತೀರಿ.
ತಾಯಿ ಮೊದಲು ತನ್ನ ಸಾಮರ್ಥ್ಯವನ್ನು ಗುರುತಿಸಿ ಕಂಡುಕೊಳ್ಳಬೇಕು. ಅದನ್ನು ಮುಕ್ತ

ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಯಾಕೆಂದರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ.

‘ಸೂಪರ್ ವುಮನ್’ ಆಗಲು ಹೋಗಿ ಸುಮಧುರ ಬಾಂಧವ್ಯವನ್ನು ಕಳೆದುಕೊಳ್ಳುವುದರಲ್ಲಿ

ಅರ್ಥವಿಲ್ಲ. ಈಗ ನಿಮ್ಮ ಅಂಗಳದಲ್ಲೇ ಚೆಂಡಿದೆ. ನೀವು ಸೂಪರ್ ವುಮನ್ ಆಗಬೇಕೆ ? ಉತ್ತಮ

ಬಾಂಧವ್ಯ ಉಳಿಸಿಕೊಳ್ಳಬೇಕೆ ? ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಜಪಾನ್ ದೇಶದ ಕಲಿಕೆ ಕುರಿತ ತಾಯಿ ಮಗುವಿನ ಬಗ್ಗೆ ಹೇಳುವುದಾದರೆ, ಅಲ್ಲಿ ಪ್ರತಿ

ಮಗುವೂ ಶಾಲೆಗೆ ಹೋಗುವ ಮುನ್ನ ಇಲ್ಲವೇ ಶಾಲೆ ಬಿಟ್ಟ ನಂತರ ದಿನಾಲೂ 20 ನಿಮಿಷ ತಾಯಿ

ಎದುರು ಏನನ್ನಾದರೂ ಓದಲೇಬೇಕು.
ತಾಯಿ ಮಗು ಓದಿದ್ದನ್ನು ಆಲಿಸಿ, ತಪ್ಪಿದ್ದಲ್ಲಿ ತಿದ್ದುತ್ತಾಳೆ. ಕೆಲ ಸಾರಿ ಆ

ಓದಿಗೆ ಪೂರಕ ಅಂಶಗಳನ್ನೂ ಹೇಳುತ್ತಾಳೆ. ಇದು ಇಬ್ಬರ ಜ್ಞಾನ ವಿಸ್ತಾರಕ್ಕೆ

ನೆರವಾಗುತ್ತದೆ. ಮಗುವಿನ ಓದಿನ ಮಟ್ಟ ಮನೆಯವರಿಗೆ ಅರಿವಾಗುತ್ತದೆ. ಮಕ್ಕಳಿಗೆ ಚಿಕ್ಕ

ವಯಸ್ಸಿನಲ್ಲೇ ಸ್ಪಷ್ಟ ಕಲಿಕೆಗೆ ಅವಕಾಶ ನೀಡುವುದು ಉತ್ತಮ.
ಮಕ್ಕಳ ಕಲಿಕೆಯಲ್ಲಿ ತಾಯಂದಿರು ಕುಟುಂಬದವರ ನೆರವು ಪಡೆಯಬೇಕು. ಆಗ ನಿರೀಕ್ಷಿತ

ಮಟ್ಟದಲ್ಲಿ ಫಲ ಕಾಣಬಹುದು.