Monday, October 22, 2012

ಶಾಲೆಗಳೇ, ಬರಲಿದ್ದಾನೆ `ಪರಿಸರ ಮಿತ್ರ' ಲೇಖನ ಪ್ರಜಾವಾಣಿಯಲ್ಲಿ (22/10/12) ಓದಿ, ಪ್ರತಿಕ್ರಿಯಿಸಿರಿ


  • October 22, 2012
  • Share  
  • [-]
  • Text
  • [+]

ನಮ್ಮ ಹಿರಿಯರು ಪರಿಸರಕ್ಕೆ ಹೊಂದಿಕೊಂಡು ಬದುಕಿದರು. ಆದರೆ ಇಂದು ನಾವು ಸ್ವಾರ್ಥಕ್ಕಾಗಿ, ಪ್ರಕೃತಿಯೇ ನಮ್ಮ ಮಾತು ಕೇಳಬೇಕೆಂದು ಹಠ ಸಾಧಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಏನೂ ಉಳಿಯದಂತೆ ಶೋಷಿಸುತ್ತಿದ್ದೇವೆ.

ಇದನ್ನು ತಡೆಯಬೇಕಾದರೆ ತಕ್ಷಣ ಎಚ್ಚೆತ್ತುಕೊಂಡು ನಮ್ಮ ಮಕ್ಕಳನ್ನು ಪರಿಸರ ರಕ್ಷಕ ಯೋಧರನ್ನಾಗಿ ಬದಲಾಯಿಸಬೇಕಾದ ತುರ್ತು ಕಾರ್ಯ ಆಗಬೇಕಾಗಿದೆ.
ಆದರೆ ಈ ಕೆಲಸ ಮಾಡುವವರಾರು?- ಈ ಪ್ರಶ್ನೆಗೆ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಸಮರ್ಪಕ ಉತ್ತರ ನೀಡಿದೆ, ಮಾತ್ರವಲ್ಲ ರಾಜ್ಯಕ್ಕೇ ಮಾದರಿಯಾಗಿದೆ.

ಸಾಗಿದ ಪಥ 
ಶಾಲಾ ಮಕ್ಕಳಲ್ಲಿ ನಮ್ಮ ಜೀವ ಮತ್ತು ಜೀವನಕ್ಕೆ ಅಗತ್ಯವಾದ ನೆಲ, ಜಲ, ಗಾಳಿ ಹಾಗೂ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲು ಶಿವಮೊಗ್ಗ ಜಿಲ್ಲೆಯ ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರ, ಕಿಡ್ಸ್ ಹಾಗೂ ಜ್ಞಾನಸಾಗರ ನಾವೆ ಟ್ರಸ್ಟ್‌ಗಳು ಒಂದಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ.

ಅದರಲ್ಲೂ ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಲು 2007-08ರಿಂದ `ಪರಿಸರ ಮಿತ್ರ` ಶಾಲಾ ಪ್ರಶಸ್ತಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಘಟಕದ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಿವೆ.
ಈ ಕಾರ್ಯಕ್ರಮದಿಂದ ಪರಿಸರ ರಕ್ಷಣೆಗೆ ಪ್ರೇರಣೆ, ಪರಿಸರ ಶಿಕ್ಷಣ ನೀಡುತ್ತಿರುವ ಶಾಲೆಗಳನ್ನು ಗುರುತಿಸಿ ಬಹುಮಾನ ನೀಡುವ ಪ್ರಯತ್ನ ಫಲ ಕಂಡಿದೆ.

ಇದರಿಂದ ಜಾಗತಿಕ ತಾಪಮಾನ ಕಡಿಮೆ ಮಾಡುವಲ್ಲಿ ಶಾಲೆಗಳ ಪಾತ್ರವನ್ನು ಮನದಟ್ಟು ಮಾಡಿಕೊಡಲಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಇದು ನಿರೀಕ್ಷೆಗಿಂತ ಹೆಚ್ಚಿನ ಪರಿಣಾಮ ಬೀರಿದೆ. ಇದರಿಂದ ಪ್ರಭಾವಿತವಾದ ಮಂಡಳಿಯ ರಾಜ್ಯ ಘಟಕ 2011-12ನೇ ಸಾಲಿನಲ್ಲಿ `ಪರಿಸರ ಮಿತ್ರ ಶಾಲಾ ಪ್ರಶಸ್ತಿ`ಯನ್ನು ಪ್ರಾಯೋಗಿಕವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀಡಿತು.

ಇದಕ್ಕೆ ಬಂದ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜನೆಗೊಂಡ ಮಂಡಳಿ 2012-13ನೇ ಸಾಲಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರಶಸ್ತಿ ನೀಡಲು ಮುಂದಾಗಿದೆ. ಶಾಲೆಗಳಲ್ಲಿ ಪರಿಸರ ಸ್ನೇಹವನ್ನು ಪ್ರೋತ್ಸಾಹಿಸುವ ಮೂಲಕ ರಾಜ್ಯದೆಲ್ಲೆಡೆ ಒಂದು ಲಕ್ಷ ಪರಿಸರ ರಕ್ಷಣಾ ಪಡೆಯನ್ನು ಸಿದ್ಧಗೊಳಿಸುವ ಕನಸು ಕಾಣುತ್ತಿದೆ.

ಆಯ್ಕೆ ಹೇಗೆ? 
ರಾಜ್ಯದ ಎಲ್ಲ ಶಾಲೆಗಳಿಗೆ ಯಾವುದೇ ಒತ್ತಾಯ ಇಲ್ಲದೆ, ಸ್ವಯಂ ಸ್ಫೂರ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಂಡಳಿ ಆಹ್ವಾನ ನೀಡುತ್ತದೆ. ಹೆಸರು ನೊಂದಾಯಿಸಿಕೊಂಡ ಆಸಕ್ತ ಶಾಲೆಗಳ ಮುಖ್ಯಸ್ಥರ ಸಭೆ ಕರೆಯಲಾಗುತ್ತದೆ.

ಅಲ್ಲಿ ಪರಿಸರ ಶಿಕ್ಷಣ, ಅದಕ್ಕೆ ಪೂರಕವಾದ ಚಟುವಟಿಕೆಗಳ ಅನುಷ್ಠಾನಕ್ಕೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗುತ್ತದೆ. `ಪರಿಸರ ಸ್ನೇಹಿ ಶಾಲಾ ಮಾರ್ಗದರ್ಶಿ` ಪುಸ್ತಕ ಮತ್ತು ಪ್ರಶ್ನಾವಳಿಗಳನ್ನು ವಿತರಿಸಲಾಗುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಶಾಲೆಗಳು ಪರಿಸರ ಪೂರಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.

ಈ ಚಟುವಟಿಕೆಗಳು ಕಾರ್ಯರೂಪಕ್ಕೆ ಬಂದ ನಂತರ ಶಾಲೆಯಲ್ಲಿ ಹತ್ತು ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಒಳಗೊಂಡ ಒಂದು ತಂಡ ರಚಿಸಬೇಕು. ಆ ತಂಡವು ಶಾಲೆಯ ಪರಿಸರ ಚಟುವಟಿಕೆಗಳ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ಬಳಿಕ ಮಾರ್ಗದರ್ಶಿ ಪುಸ್ತಕದಲ್ಲಿನ ಮುದ್ರಿತ ಪ್ರಶ್ನಾವಳಿಗಳನ್ನು ತುಂಬುತ್ತಾ, ಸ್ವತಃ ಅಂಕಗಳನ್ನು ಕೊಟ್ಟುಕೊಳ್ಳಬೇಕು. ಎಲ್ಲ ತುಂಬಿದ ಮೆಲೆ ಅದನ್ನು ಜಿಲ್ಲಾ ಅನುಷ್ಠಾನ ಕೇಂದ್ರಕ್ಕೆ ಕಳುಹಿಸಿ ಕೊಡಬೇಕು.

ಜಿಲ್ಲಾ ಕೇಂದ್ರದಲ್ಲಿ ತಜ್ಞರು, ಶಾಲೆಗಳಿಂದ ಬಂದ ಸ್ವಯಂ ಮೌಲ್ಯಮಾಪನ ಪತ್ರಿಕೆಗಳನ್ನು ಪರಿಶೀಲಿಸಿ ಉತ್ತಮವಾದ 30 ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಈ ಶಾಲೆಗಳಿಗೆ ಭೇಟಿ ನೀಡುವ ತಜ್ಞರ ತಂಡ ಮತ್ತಷ್ಟು ಮಾರ್ಗದರ್ಶನ ನೀಡುತ್ತದೆ. ಬಳಿಕ ತಜ್ಞರ ಅಭಿಪ್ರಾಯ ಸಂಗ್ರಹಿಸಿ 11 ಅತ್ಯುತ್ತಮವಾದವನ್ನು `ಹಸಿರು ಮಿತ್ರ` ಶಾಲೆಗಳು ಮತ್ತು 10 ಉತ್ತಮವಾದವನ್ನು `ಕಿತ್ತಳೆ ಶಾಲೆ`ಗಳೆಂದು ಆಯ್ಕೆ ಮಾಡಲಾಗುತ್ತದೆ.

ಹಸಿರು ಶಾಲೆಗಳಿಂದ ನಾಲ್ವರು ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕರನ್ನು ಸೇರಿಸಿ ಒಟ್ಟು 55 ಜನರ ತಂಡ ರಚಿಸಲಾಗುತ್ತದೆ. ಈ ತಂಡಕ್ಕೆ ಶಾಲೆಗಳ ಮೌಲ್ಯಮಾಪನ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ. ತಂಡವು 11 ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳ ಅವಲೋಕನ ಮತ್ತು ಮೌಲ್ಯಮಾಪನ ಮಾಡುತ್ತದೆ.

ಅಲ್ಲಿ ಪರಿಸರ ಸಂಬಂಧಿ ಚಟುವಟಿಕೆಗಳು, ಕಲಿಕೆ, ಯಶೋಗಾಥೆಗಳ ಅನುಭವ ಹಂಚಿಕೆ, ಪರಸ್ಪರ ಬಾಂಧವ್ಯಗಳ ಮೌಲ್ಯಮಾಪನ ಮಾಡಿ `ಪರಿಸರ ಮಿತ್ರ` ಶಾಲೆಯಾಗಿ ಆಯ್ಕೆಯಾಗಲು ಇರುವ ಸಮರ್ಥ ಕಾರಣಗಳನ್ನು ಗುರುತಿಸುತ್ತದೆ.

 ಎಲ್ಲರೂ ಕೂಡಿಕೊಂಡು ಪ್ರಜಾಪ್ರಭುತ್ವದ ರೀತಿಯಲ್ಲಿ ಒಂದು ಶಾಲೆಯನ್ನು `ಜಿಲ್ಲಾ ಮಟ್ಟದ ಪರಿಸರ ಮಿತ್ರ` ಶಾಲೆ ಎಂದು ಆಯ್ಕೆ ಮಾಡುತ್ತಾರೆ. ಇಂತಹ ಶಾಲೆಗೆ 20 ಸಾವಿರ ರೂಪಾಯಿ ನಗದು ಹಾಗೂ ಪಾರಿತೋಷಕ, ಮೊದಲ ಹತ್ತು ಶಾಲೆಗಳಿಗೆ `ಹಸಿರು ಮಿತ್ರ` ಶಾಲೆ ಪ್ರಶಸ್ತಿ ಹಾಗೂ ಎರಡು ಸಾವಿರ ರೂಪಾಯಿ, ನಂತರದ ಹತ್ತು ಶಾಲೆಗಳಿಗೆ `ಕಿತ್ತಳೆ ಶಾಲೆ` ಪ್ರಶಸ್ತಿ ಹಾಗೂ ಒಂದು ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಜಿಲ್ಲಾ `ಪರಿಸರ ಮಿತ್ರ` ಶಾಲೆಯನ್ನು ರಾಜ್ಯ ಮಟ್ಟದಲ್ಲಿಯೂ ಆಯ್ಕೆಗೆ ಪರಿಗಣಿಸಲಾಗುತ್ತದೆ. ಅಲ್ಲಿ ಪ್ರತಿ ವಲಯಕ್ಕೆ ಎರಡರಂತೆ ಒಟ್ಟು ರಾಜ್ಯ ಮಟ್ಟದ 12 ಪರಿಸರ ಮಿತ್ರ ಶಾಲೆಗಳನ್ನು ಗುರುತಿಸಿ 70 ಸಾವಿರ ರೂಪಾಯಿ ನಗದು ನೀಡಿ ಪುರಸ್ಕರಿಸಲಾಗುತ್ತದೆ.

ಹಾಗಿದ್ದರೆ ಶಾಲೆಗಳೇ ಧಾವಿಸಿ. ಭವಿಷ್ಯದಲ್ಲಿ ಸಂತಸದಿಂದ ಬದುಕಲು ನೆರವಾಗುವ `ಪರಿಸರ ಮಿತ್ರ`ನನ್ನು ಪಡೆಯಲು ಇನ್ನೇಕೆ ತಡ? (ಈ ಕುರಿತು ಹೆಚ್ಚಿನ ಮಾಹಿತಿಗೆ ಬಿ.ಇ.ಒ ಅಥವಾ ಡಿ.ಡಿ.ಪಿ.ಐ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಕೇಂದ್ರ ಅಥವಾ ರಾಜ್ಯ ಕಚೇರಿಯನ್ನು ಸಂಪರ್ಕಿಸಬಹುದು. ರಾಜ್ಯ ಕಚೇರಿಯ ದೂರವಾಣಿ- 080-25588151)

ಪ್ರಶಸ್ತಿ- ಏನಿದರ ವಿಶೇಷ?
ಶಾಲೆಗಳಲ್ಲಿ ಪರಿಸರಕ್ಕೆ ಪೂರಕವಾಗಿ ನಡೆಯುವ ಚಟುವಟಿಕೆಗಳನ್ನು ಗುರುತಿಸಿ, ಪ್ರಶಂಸಿಸುವುದು. ಪರಿಸರದ ಪ್ರಮುಖ ಅಂಶಗಳಾದ ಗಾಳಿ, ನೀರು, ಮಣ್ಣು, ಆರೋಗ್ಯ, ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆಯ ಆರು ಕ್ಷೇತ್ರಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು ಮತ್ತಷ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರೇರೇಪಿಸುತ್ತಾ ಅನುಷ್ಠಾನಕ್ಕೆ ಕಾಲಾವಕಾಶ ಕೊಡುವುದು.

ಶಾಲೆಯಿಂದ ಹೊರಟ ಸಂದೇಶ ಸಮುದಾಯಕ್ಕೆ ತಲುಪಬೇಕು. ಅದರಿಂದ ಸುತ್ತಲಿನ ಸಮುದಾಯ ಪ್ರೇರಣೆಗೊಂಡು ಪರಿಸರಕ್ಕೆ ಪೂರಕವಾದ ಜೀವನ ನಡೆಸುವುದನ್ನು ಬೆಂಬಲಿಸುವುದಕ್ಕೆ ಇಲ್ಲಿ ಆದ್ಯತೆ.

No comments:

Post a Comment