Monday, March 5, 2012

ಪರೀಕ್ಷೆ ಗೆಲುವಿಗೆ ಸೋಪಾನದ ಹಾದಿಗಳು ಪ್ರಜಾವಾಣಿ (5/3/2012)





ಮುಖಪುಟ>ಶಿಕ್ಷಣ ಪ್ರಜಾವಾಣಿ ವೆಬ್

ಪರೀಕ್ಷೆ ಗೆಲ್ಲಲು ಎಂಟು ಸೂತ್ರ ಪರಮೇಶ್ವರಯ್ಯ ಸೊಪ್ಪಿಮಠ
March 05, 2012 Share   [-] Text [+]
--------------------------------------------------------------------------------
ಈ ವಿಭಾಗದಿಂದ ಇನ್ನಷ್ಟು ನಮ್ಮ ಮಕ್ಕಳ ದೃಷ್ಟಿಯಲ್ಲಿ `ಪರೀಕ್ಷೆ ಎಂದರೆ ಬಹು ದೊಡ್ಡ
ಸವಾಲು; ಅದನ್ನು ಎದುರಿಸುವುದು ಸುಲಭದ ಮಾತಲ್ಲ`. ಯಾಕಾದರೂ ಈ ಪರೀಕ್ಷಾ ಕಾಲ
ಆರಂಭವಾಗುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ವಿದ್ಯಾರ್ಥಿಗಳು ಹಳಿ
ತಪ್ಪುತ್ತಿರುವುದು ಇಲ್ಲೇ. ಅವರು ಪರೀಕ್ಷೆ ನೋಡುವ ದೃಷ್ಟಿಕೋನ ಬದಲಿಸಿಕೊಂಡರೆ ಅರ್ಧ
ಹಾದಿ ಸವೆಸಿದಂತೆ.

ಪರೀಕ್ಷೆಯನ್ನು ತಿರಸ್ಕಾರದಿಂದ ನೋಡುವ ಬದಲು ಮುಕ್ತವಾಗಿ ಸ್ವೀಕರಿಸಬೇಕು. `ಒಂದು
ವರ್ಷದ ಅವಧಿಯಲ್ಲಿ ನನ್ನ ಜ್ಞಾನದಲ್ಲಾಗಿರುವ ಬೆಳವಣಿಗೆ ತಿಳಿಯಲು ಇದು ಸರಿಯಾದ
ಮಾರ್ಗ` ಎಂದು ಅರಿಯಬೇಕು. `ಏಕ ಕಾಲದಲ್ಲಿ ಲಕ್ಷಾಂತರ ಮಕ್ಕಳನ್ನು ಅಳೆಯಲು ಬರವಣಿಗೆಯ
ಪರೀಕ್ಷೆಯೊಂದೇ ಇದುವರೆಗೂ ನಮಗೆ ಸೂಕ್ತವೆನಿಸಿದ ರಹದಾರಿ` ಎಂದು ಒಂದು ಸಾರಿ ಮನದಲ್ಲಿ
ಗಟ್ಟಿ ಮಾಡಿಕೊಂಡರೆ ಪರೀಕ್ಷೆ ಮತ್ತಷ್ಟು ಸಲೀಸು.

ಬಹಳ ಮಹತ್ವವೆಂದರೆ ಓದಿದ್ದನ್ನು ಹೇಗೆ ನೆನಪಿಟ್ಟುಕೊಳ್ಳುವುದು ಮತ್ತು ಯಾವ ರೀತಿ
ಅಂಕಗಳಾಗಿ ಬದಲಾಯಿಸಿಕೊಳ್ಳಬೇಕು ಎಂಬ ಕೌಶಲ ಬೇಕು. ಅದಕ್ಕೆ ಅತ್ಯಂತ ಸುಲಭವಾದ ಎಂಟು
ಸೂತ್ರಗಳು ಇಲ್ಲಿವೆ...

ಸಮಯದ ಮಹತ್ವ

ಸಮಯದ ಮಹತ್ವವನ್ನು ಸಾರುವ ಅನೇಕ ಕಥೆಗಳು ಹಾಗೂ ಉದಾಹರಣೆಗಳು ಪ್ರಚಲಿತದಲ್ಲಿವೆ.
ಅವುಗಳತ್ತ ಒಮ್ಮೆ ಕಣ್ಣಾಡಿಸಬೇಕು. ವಿದ್ಯಾರ್ಥಿ ಜೀವನದ ಸಮಯ ಅತೀ ಅಮೂಲ್ಯ. ಅದನ್ನು
ಸರಿಯಾಗಿ ಬಳಸಲೇಬೇಕು. ಅದರಲ್ಲೂ ಪರೀಕ್ಷಾ ಸಮಯದಲ್ಲಂತೂ ಪ್ರತಿ ನಿಮಿಷ, ಗಂಟೆಗಳಿಗೂ
ಬೆಲೆ.  ಅನೇಕರು ಮೊದಲೆಲ್ಲ ಸಮಯವನ್ನು ಬೇಕಾಬಿಟ್ಟಿ ವ್ಯಯಮಾಡಿ ಕೊನೆ ಗಳಿಗೆಯಲ್ಲಿ
ಊಟ, ನಿದ್ದೆ ಬಿಟ್ಟು ಓದುತ್ತಾರೆ. ಇದು ತರವಲ್ಲ.

ಪರೀಕ್ಷಾ ದಿನಗಳಲ್ಲಿ, ದಿನದ 24 ಗಂಟೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು. ಒಂದು
ಭಾಗ ಸಂಪೂರ್ಣ ನಿದ್ರೆಗೆ ಮೀಸಲು. ಎರಡನೆ ಭಾಗ ಊಟ ಇತ್ಯಾದಿಗಳ ಜೊತೆಗೆ ವಿಶ್ರಾಂತಿ,
ಮೂರನೇ ಭಾಗವನ್ನು ಅಭ್ಯಾಸಕ್ಕೆ ಮೀಸಲಿಡಬೇಕು.

ಗಂಭೀರ ಅಧ್ಯಯನ

ಶಿಕ್ಷಕರು ಪಾಠ ಮಾಡುವಾಗ ಗಮನವಿಟ್ಟು ಆಲಿಸಿದರೆ ಅರ್ಧಕ್ಕಿಂತ ಹೆಚ್ಚು
ಮನನವಾಗುತ್ತದೆ. ನಂತರ ಅದರಲ್ಲಿರುವ ಪ್ರಶ್ನೆಗಳಿಗೆ ಸ್ವತಃ ನೋಟ್ಸ್ ಬರೆಯುವುದು,
ಪೂರಕ ಪುಸ್ತಕಗಳ ಓದು, ತನ್ನನ್ನು ತಾನೇ ಸ್ವತಃ ಮೌಲ್ಯಮಾಪನ ಮಾಡಿಕೊಳ್ಳುವುದರಿಂದ
ಉಳಿದರ್ಧ ನೆನಪಿನಲ್ಲಿರುತ್ತದೆ. ಪರೀಕ್ಷಾ ಸಮಯ ಹತ್ತಿರವಾದಂತೆ ಓದಲು `ಕಠಿಣ ವಿಷಯ,
ಸರಳ ವಿಷಯ`ಗಳಿಗೆ ಅನುಗುಣವಾಗಿ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು.

ಇನ್ನು ಕೆಲವರು ನೆನಪಿಟ್ಟುಕೊಳ್ಳಲು ಸ್ವಲ್ಪ ಸಮಯ ಓದುತ್ತಾರೆ. ನಂತರ ಓದಿರುವುದರ
ಪ್ರಮುಖಾಂಶಗಳನ್ನು ನೆನಪಿಸಿಕೊಳ್ಳುತ್ತಾ ಬರೆಯುತ್ತಾರೆ. ಅದರಲ್ಲಿ ಎಲ್ಲವೂ ನೆನಪಿಗೆ
ಬಾರದಿದ್ದರೆ ಮತ್ತೆ ಓದಿ, ಬಿಟ್ಟಿರುವ ಅಂಶಗಳನ್ನು ಬರೆದುಕೊಳ್ಳುತ್ತಾರೆ. ನಂತರ
ಸ್ವಲ್ಪ ಸಮಯ ವಿರಾಮ ಪಡೆದು ಮತ್ತೆ ಹೀಗೆಯೇ... ಓದುವುದನ್ನು ಅಭ್ಯಾಸ ಮಾಡುವುದು
ಒಳ್ಳೆಯ ಪದ್ಧತಿ. ಇದು ಓದು ಮತ್ತು ಬರಹಕ್ಕೆರಡಕ್ಕೂ ಆದ್ಯತೆ ನೀಡುತ್ತದೆ.

ದೋಷರಹಿತ ಬರವಣಿಗೆ

ಅನೇಕರಿಗೆ ಬರವಣಿಗೆ ದೊಡ್ಡ ಸಮಸ್ಯೆ. ಆದರೆ ಗಮನಿಸಬೇಕಾದುದೆಂದರೆ ವಿದ್ಯಾರ್ಥಿಗಳ
ಭವಿಷ್ಯ ಅವರ ಬರವಣಿಗೆಯಲ್ಲಿಯೇ ಅಡಕವಾಗಿರುತ್ತದೆ. ಹಾಗಾಗಿ ಅವರು ಪರೀಕ್ಷೆಗಿಂತ
ಮುಂಚಿತವಾಗಿಯೇ ಉತ್ತರಗಳನ್ನು ಸುಂದರವಾಗಿ, ದೋಷಗಳಾಗದಂತೆ ಬರೆಯುವುದನ್ನು ಅಭ್ಯಾಸ
ಮಾಡಬೇಕು. ಆರಂಭದ ಆಕರ್ಷಣೆ- ಮುಕ್ತಾಯದ ನಿಲುವುಗಳ ಬಗ್ಗೆ ಖಚಿತತೆ ಇರುವುದು ಹೆಚ್ಚು
ಅನುಕೂಲ.

ಪಠ್ಯಪುಸ್ತಕಕ್ಕೆ ಮೊದಲ ಪ್ರಾಶಸ್ತ್ಯ

ಅನೇಕರು ಪಠ್ಯ ಪುಸ್ತಕ ಓದಬೇಕೆ? ಡೈಜೆಸ್ಟ್ ಓದಬೇಕೆ? ನೋಟ್ಸ್ ಓದಬೇಕೆ? ಎಂಬುದರ
ತೊಳಲಾಟದಲ್ಲಿಯೇ ಸಮಯ ಹಾಳುಮಾಡುತ್ತಾರೆ. ಪರೀಕ್ಷಾ ಓದಿನಲ್ಲಿ ಪಠ್ಯಪುಸ್ತಕಕ್ಕೆ ಮೊದಲ
ಪ್ರಾಶಸ್ತ್ಯ. ಚಿಕ್ಕ ಉತ್ತರ ಮತ್ತು ಬಹು ಆಯ್ಕೆಯ ಪ್ರಶ್ನೆಗಳಿಗೆ ಪಠ್ಯಪುಸ್ತಕವೇ
ಮೂಲಾಧಾರ. ಪರೀಕ್ಷೆಯಲ್ಲಿ ಅಂಕವೇ ಪ್ರಧಾನವಾಗಿರುವುದರಿಂದ ಅದರತ್ತಲೇ ಲಕ್ಷ್ಯ
ನೆಟ್ಟಿರಬೇಕು.

ನಿರಂತರವಾಗಿ ಓದುವುದು - ಬರೆಯುವುದು ಯಾರಿಗೂ ಸಹ್ಯವಲ್ಲ. ಅದಕ್ಕೆ ವಿಭಿನ್ನವಾದ
ಮಾರ್ಗಗಳನ್ನು ಕಂಡುಕೊಳ್ಳಬೇಕು. ಅಂದರೆ ಮುಖ್ಯವಾದ ಸೂತ್ರ, ಇಸ್ವಿ, ಪ್ರಮೇಯ,
ಚಿತ್ರಗಳನ್ನು ದೊಡ್ಡ ಅಕ್ಷರದಲ್ಲಿ ಬರೆದು ಕೊಠಡಿಯ ಗೋಡೆಗೆ ಅಂಟಿಸಿಕೊಳ್ಳಬೇಕು.
ಅಡ್ಡಾಡುವಾಗ ಅದರತ್ತ ಕಣ್ಣ ಹಾಯಿಸಿದರೆ ಸಾಕು, ನಮಗೆ ಅರಿವಿಲ್ಲದಂತೆ ಆ ಅಂಶಗಳು
ತಲೆಯೊಳಗೆ ಭದ್ರವಾಗುತ್ತವೆ.

ಗುಂಪು ಚರ್ಚೆಯೂ ನೆನಪಿಟ್ಟುಕೊಳ್ಳಲು ಒಳ್ಳೆಯ ಅಸ್ತ್ರ. ಮೂರು-ನಾಲ್ಕು ಗೆಳೆಯರು
ಜೊತೆಗೂಡಿ, ಒಂದು ವಿಷಯದ ಕುರಿತು ಗುಂಪು ಚರ್ಚೆಯನ್ನು ಕೆಲವು ಗಂಟೆ ಮಾಡಿದರೆ ಹೆಚ್ಚು
ಮನನವಾಗುತ್ತದೆ. ಗೆಳೆಯರ ವಿಚಾರಗಳು ಕೆಲ ಸಾರಿ ನೆರವಿಗೆ ಬರುತ್ತವೆ. ಆದರೆ ಚರ್ಚೆ
ಅನಗತ್ಯ ವಿಷಯಗಳತ್ತ ವಾಲದಂತೆ ಎಚ್ಚರಿಕೆ ವಹಿಸಬೇಕು.

ಮೊಬೈಲ್ ಎಲ್ಲರನ್ನೂ ಆಕರ್ಷಿಸಿದೆ. ಅದನ್ನು ಒಳ್ಳೆಯದಕ್ಕೂ ಬಳಸಬಹುದು. ಮೊಬೈಲ್‌ನಲ್ಲಿ
ಪ್ರಶ್ನೋತ್ತರಗಳನ್ನು ಚೆನ್ನಾಗಿ ರೆಕಾರ್ಡ್ ಮಾಡಿಕೊಳ್ಳಬೇಕು. ಆನಂತರ ಏನಾದರೂ ಕೆಲಸ
ಮಾಡುತ್ತಿರಿ, ಅದನ್ನು ಕಿವಿಯಲ್ಲಿ ಹಾಕಿಕೊಂಡರೆ ಸಾಕು. ಇದು ಓದುವುದಕ್ಕಿಂತ ಹೆಚ್ಚು
ಖುಷಿಯನ್ನು ಕೊಡುತ್ತದೆ. ಸಂತಸದ ಓದು ಹೆಚ್ಚು ಪರಿಣಾಮಕಾರಿ.

ಆಹಾರ ಪಾನೀಯ

ಪರೀಕ್ಷೆ ಕಾಲದಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುವುದು ಅಥವಾ ಉಪವಾಸ ಇರುವುದು
ಎರಡೂ ಅಪಾಯಕಾರಿ. ಕರಿದ ಪದಾರ್ಥಗಳು, ಹೆಚ್ಚು ಸಿಹಿ-ಖಾರದ ಆಹಾರ ಬೇಡ. ಸಾಧ್ಯವಾದಷ್ಟು
ಸಮತೋಲನ ಆಹಾರ ಸೂಕ್ತ. ಕೆಲವರು ನಿದ್ದೆಗೆಟ್ಟು ಓದುವುದಕ್ಕಾಗಿ ಅಕಾಲದಲ್ಲಿಯೂ ಕಾಫಿ,
ಟೀ ಸೇವನೆ ಮಾಡುತ್ತಾರೆ. ಇದು ಸಲ್ಲದು. ಉತ್ತಮವಾದ, ತಾಜಾ ತರಕಾರಿ-ಹಣ್ಣುಗಳ ಸೇವನೆ
ಆರೋಗ್ಯಕರ.

ಬೇಸಿಗೆ ಕಾಲದಲ್ಲಿಯೇ ನಮ್ಮಲ್ಲಿ ಪರೀಕ್ಷೆಗಳು ನಡೆಯುತ್ತವೆ. ನಮ್ಮ ದೇಹದಲ್ಲಿ
2/3ರಷ್ಟು ನೀರಿದೆ ಎಂಬುದನ್ನು ಮರೆಯಬಾರದು. ನೀರಿನಂಶ ಸದಾ ಸರಿಯಾದ
ಪ್ರಮಾಣದಲ್ಲಿರಬೇಕು, ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತೇವೆ. ಹಾಗಾಗಿ ಬಾಯಾರಿಕೆ
ಆಗುವುದಕ್ಕಿಂತ ಮುಂಚಿತವಾಗಿಯೇ ನೀರನ್ನು ಕುಡಿಯಬೇಕು. ನಮ್ಮ ಆಹಾರವು ಸರಿಯಾಗಿ
ಜೀರ್ಣವಾಗಲು ನೀರು ಮಹತ್ವದ್ದಾಗಿದೆ. ಫ್ರಿಜ್ ನೀರು- ಅತೀ ಬಿಸಿಯಾದ ನೀರನ್ನು
ಕುಡಿಯುವುದು ಬೇಡ ಎಂಬುದು ನೆನಪಿರಲಿ.

ನಿದ್ರಾದೇವಿ

ದಿನವಿಡಿ ದುಡಿದ ದೇಹಕ್ಕೆ ನಿದ್ರೆ ಅಗತ್ಯ. ಅದರಿಂದ ಮೆದುಳು ಹೆಚ್ಚು
ಉಲ್ಲಸಿತವಾಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಅನೇಕರು ನಿದ್ದೆಗೆಟ್ಟು
ಓದುತ್ತಾರೆ. ಆದರೆ ಅವರ ಮೆದುಳು ಸರಿಯಾಗಿ ಸ್ಪಂದಿಸುವುದಿಲ್ಲ. ಅದಕ್ಕೆ `ನಾನು ಎಷ್ಟು
ಓದಿದರೂ ನನ್ನ ತಲೆಗೆ ಹತ್ತುತ್ತಿಲ್ಲ` ಎಂದು ಹೇಳುತ್ತಿರುತ್ತಾರೆ. ಮೆದುಳಿಗೆ ಸರಿಯಾದ
ವಿರಾಮ ದೊರೆಯದಿದ್ದಲ್ಲಿ ಯಾವ ಪ್ರಯೋಜನವೂ ಇಲ್ಲ. ಪರೀಕ್ಷಾ ಸಮಯದಲ್ಲಿ ದಿನಕ್ಕೆ ಏಳು
ಗಂಟೆ ನಿದ್ದೆ ಮಾಡಬೇಕು. ಮಧ್ಯಾಹ್ನದ ಅವಧಿ ಒಂದು ಗಂಟೆ ಮೆದುಳಿಗೆ ವಿಶ್ರಾಂತಿ
ಕೊಡುವುದು ಸೂಕ್ತ.

ಯಶಸ್ಸು ಅಂಗೈಲಿ

ತಲೆಯಲ್ಲಿ ಬರುವ ನಕಾರಾತ್ಮಕ ಅಂಶಗಳಿಗೆ ಮೊದಲು ತಡೆಯೊಡ್ಡಬೇಕು. ಮನಸ್ಸಿಗೆ ಯಾವುದೇ
ಒತ್ತಡ ಹೇರುವುದು ಬೇಡ. ತದೇಕ ಚಿತ್ತದಿಂದ ಓದಿದರೆ ಮೆದುಳಿನ ನೆನಪಿನ ಮೂಲವು
ಜಾಗ್ರತಗೊಂಡು ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಅದರಿಂದ ಆತ್ಮವಿಶ್ವಾಸ
ಗಟ್ಟಿಯಾಗುತ್ತದೆ. ಅದು ಅಪ್ಪ-ಅಮ್ಮ, ಶಿಕ್ಷಕರ ಕೈಲಿಲ್ಲ. ನಿಮ್ಮ ಅಂಗೈಲಿದೆ.

ಪರೀಕ್ಷೆ ಎಂದಾಗ ಹೆದರಬಾರದು. ಹೆದರಿದಾಗ ಮೆದುಳು ಸಮರ್ಪಕವಾಗಿ ಕೆಲಸ
ನಿರ್ವಹಿಸುವುದಿಲ್ಲ. ಕೆಲವರಿಗೆ ಯಾವುದೋ ಒಂದು ವಿಷಯ ಕಠಿಣವಾಗಿರುತ್ತದೆ. ಅದರ ಬದಲು
ಕಠಿಣ ಎನಿಸಿದ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿ, ಇತರರ ನೆರವು, ಅಧ್ಯಯನದ ವಿಧಾನ
ಬದಲಾವಣೆ ಮಾಡಿಕೊಂಡಲ್ಲಿ ಅದು ಕೂಡಾ ಸರಳವಾಗುತ್ತದೆ. ಪರೀಕ್ಷೆ ದಿನದಂದು ಹೆಚ್ಚು
ಸಂತಸದಿಂದಿರಬೇಕು. ತಮ್ಮ ಓದಿನ ಫಲ ಕೊಡುವ ದಿನವದು ಎಂದು ಭಾವಿಸಬೇಕು. ಸಂತಸದಿಂದ
ಪರೀಕ್ಷಾ ಕೊಠಡಿಗೆ ಪ್ರವೇಶಿಸಬೇಕು.

ನಮ್ಮ ಸೋಲಿಗೆ, ಅಪಯಶಸ್ಸಿಗೆ ಯಾವ ಕಾರಣಗಳೂ ಸಕಾರಣಗಳಲ್ಲ. ಹಾಗಾಗಿ ವಿದ್ಯಾರ್ಥಿ
ಮಿತ್ರರೆ, ನಿಮ್ಮ ಬಂಗಾರದಂಥ  ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ. ಈಗಲೂ ಕಾಲ
ಮಿಂಚಿಲ್ಲ, ಪ್ರತಿ ಸೋಲಿನ ಹಿಂದೊಂದು ಯಶಸ್ಸು ಇರುತ್ತದೆ. ನೀವೀಗಲೇ ಮೇಲೇಳಿ,
ಪ್ರಯತ್ನಕ್ಕಿಳಿಯಿರಿ. ನೀವಲ್ಲದೆ ಮತ್ತಾರೂ ನಿಮ್ಮನ್ನು ಮೇಲೆತ್ತಲಾರರು.

No comments:

Post a Comment