ತಾಯಿ ಮತ್ತು ಶಿಕ್ಷಕಿಯಾಗಿ... ಪರಮೇಶ್ವರಯ್ಯ ಸೊಪ್ಪಿಮಠ
ದಾವಣಗೆರೆಯ ಪ್ರತಿಭಾ ದೂರವಾಣಿಯಲ್ಲಿ ಮಾತನಾಡುತ್ತಾ ‘ನನ್ನ
ಮಗ ಪ್ರಜ್ವಲ್‌ನ ಪರೀಕ್ಷೆಯ ಸಮಯದಲ್ಲಿ ಮನೆಯಾಗ ಒಂದು ರೀತಿ ಉದ್ವಿಗ್ನ ವಾತಾವರಣ
ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ನನ್ನ ಮಗನ ಜೊತೆ ನಾನು ಪರೀಕ್ಷೆ
ಬರೆಯುತ್ತಿದ್ದೇನೆ ಎಂಬಷ್ಟು ಒತ್ತಡಕ್ಕೆ ಒಳಗಾಗಿದ್ದೆ’ ಎಂದು ಹೇಳಿದಾಗ, ನನಗೆ ತಾಯಿ
ಮತ್ತು ಶಿಕ್ಷಕಿ ನಡುವಿನ ಅಂತರ ಕುರಿತ ಚಿಂತನೆ ಪ್ರಾರಂಭವಾಯಿತು.
ನಮ್ಮ ಹಿರಿಯರು ‘ಜನನಿ ತಾನೆ ಮೊದಲ ಗುರು’ ಎಂದು ಹೇಳಿದ್ದಾರೆ. ಅದು ಬದುಕಿನ ಪಾಠ
ಕಲಿಕೆಗೆ ಅಗತ್ಯವೂ ಹೌದು. ಆದರೆ ಇಂದಿನ ಶಾಲಾ ಕಲಿಕೆಯ ಬೆನ್ನು ಹತ್ತಿರುವ ನಾವು
ಬದುಕಿನ ಪಾಠಕ್ಕಿಂತ ರ್ಯಾಂಕ್‌ಗೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ. ಅದರಿಂದಾಗಿ
ಅನೇಕರು ಉತ್ತಮ ಶಿಕ್ಷಕಿಯಾಗುತ್ತಾ, ತಮ್ಮ ತಾಯ್ತನದ ಹೊಣೆಗಾರಿಕೆಯಿಂದ
ನುಣುಚಿಕೊಳ್ಳುತ್ತಿದ್ದಾರೆ ಇಲ್ಲವೇ ವಂಚಿತರಾಗುತ್ತಿದ್ದಾರೆ.
ಪ್ರಸ್ತುತ ಸ್ಪರ್ಧಾತ್ಮಕ ಯುಗದ ಶಾಲೆಗಳಲ್ಲಿ ಒಂದು ಪಕ್ಷ ಮಗು ಕಲಿಕೆಯಲ್ಲಿ
ಹಿಂದುಳಿದಿದ್ದರೆ ಮನೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗಬೇಕೆಂದು ಶಾಲೆಗಳು
ಆಶಿಸುತ್ತವೆ. ಅದು ತಪ್ಪೇನಲ್ಲ. ಅಂತಹ ಸನ್ನಿವೇಶದಲ್ಲಿ ಮನೆಯ ವಾತಾವರಣ ಸಂಪೂರ್ಣ
ಬಿಗಡಾಯಿಸುತ್ತದೆ.
ತಾಯಿಯ ದಿನಚರಿಯೆಲ್ಲಾ ಮಗುವಿನ ಕಲಿಕೆ ಮೇಲೆ ಕೇಂದ್ರೀಕೃತವಾಗುತ್ತದೆ. ಈ ಸಮಯದಲ್ಲಿ
ಗಮನಿಸಿ ಅನೇಕ ತಾಯಂದಿರು ತಮ್ಮ ಗೆಳತಿಯರೊಡನೆ ಮಾತನಾಡಲೂ ಇಚ್ಛಿಸುವುದಿಲ್ಲ. ಇದು
ಇಂದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ಘಟನೆಯಂತೆ ಸಾಮಾನ್ಯವಾಗುತ್ತಿದೆ.
ಯಾಕೆಂದರೆ ವರ್ತಮಾನದಲ್ಲಿ ತಾಯಿ ಪರಿಪೂರ್ಣವಾಗಿ ಶಿಕ್ಷಕಿ ಕೆಲಸಮಾಡಲು
ಪ್ರಾರಂಭಿಸಿದ್ದಾಳೆ. ಆಕೆಗೆ ಆಗ ಉಳಿದ ಎಲ್ಲಾ ಕೆಲಸಗಳು ನಗಣ್ಯವಾಗುತ್ತವೆ. ಆದರೆ
ಎಲ್ಲರೂ ಉತ್ತಮ ಶಿಕ್ಷಕಿಯಾಗಲಾರರು ಎಂಬುದು ಇಲ್ಲಿ ಗಮನಿಸಬೇಕು. ಹಾಗಾಗಿ ಒಂದು ಕಡೆ
ಆಕೆ ಉತ್ತಮ ತಾಯಿಯೂ ಆಗುವುದಿಲ್ಲ, ಮತ್ತೊಂದೆಡೆ ಒಳ್ಳೆಯ ಶಿಕ್ಷಕಿಯೂ ಆಗದೆ ಅತಂತ್ರ
ಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಾಳೆ. ಇದು ಮಗುವಿನ ಮೇಲೆ ವ್ಯತಿರಿಕ್ತ
ಪರಿಣಾಮಗಳನ್ನು ಬೀರುತ್ತದೆ.
ಹಿನ್ನೆಲೆ ಗಮನಿಸಿದರೆ
ಕೆಲವು ಸಾರಿ ಅನೇಕ ತಾಯಂದಿರು ತಮ್ಮ ಮಗುವಿನ ಕಲಿಕೆಯಲ್ಲಿ ಒತ್ತಾಯಪೂರ್ವಕವಾಗಿ
ಪಾಲ್ಗೊಳ್ಳುತ್ತಾರೆ. ಅವರಿಗೆ ಕಲಿಸಲು ಆಸಕ್ತಿ ಇರುವುದಿಲ್ಲ.
ಶಾಲೆಯಲ್ಲಿ ಮಗುವಿನ ಕಲಿಕಾ ಹಂತ ಕೆಳಮಟ್ಟದಲ್ಲಿದ್ದಾಗ ಅನ್ಯಮಾರ್ಗವಿಲ್ಲದೆ
ಕಲಿಸುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಅಂತವರು ತಮ್ಮ ಮಗುವಿಗೆ ಉತ್ತಮ
ಶಿಕ್ಷಕಿಯಾಗಲು ಸಾಧ್ಯವಿಲ್ಲ. ಅವರು ಅಸಮಾಧಾನದಿಂದ ಕಲಿಸ ತೊಡಗಿದರೆ ಉದ್ವೇಗ/ಸಿಟ್ಟು
ಹೆಚ್ಚಾಗಿ ಮಗುವನ್ನು ತೆಗಳುವುದು-ಹೊಡೆಯುವುದು ಹೇಳಿಕೊಟ್ಟಿದ್ದಕ್ಕಿಂತ
ಹೆಚ್ಚಾಗಿರುತ್ತವೆ. ಮಗು ಮೊದಲೆ ಕಲಿಕಾ ನ್ಯೂನತೆಯ ಭಯದಲ್ಲಿರುತ್ತದೆ. ಅದರ ಜೊತೆ ಈ
ರೀತಿ ತಾಯಿಯ ವರ್ತನೆ ಮತ್ತಷ್ಟು ಪ್ರಪಾತಕ್ಕೆ ತಳ್ಳಿದಂತಾಗುತ್ತದೆ.
ಮಗುವಿನ ಕಲಿಕಾ ಸಾಮರ್ಥ್ಯ ಹಿಂದುಳಿದಿದೆ ಎಂದರೆ ಸಾಕು ತಾಯಿ ತನ್ನ ಎಲ್ಲಾ
ಇಷ್ಟಗಳನ್ನು ತ್ಯಾಗಮಾಡಿ, ಅನಿವಾರ್ಯವಾಗಿಯಾದರೂ ಕಲಿಕಾ ಪ್ರಕ್ರಿಯೆಯಲ್ಲಿ
ತೊಡಗುತ್ತಾಳೆ. ಇದರಿಂದ ತಾಯಿ ಮಗುವಿನ ಸುಮಧುರ ಬಾಂಧವ್ಯ ನಿಧಾನವಾಗಿ ಕಡಿಮೆಯಾಗಲು
ಕಾರಣವಾಗುತ್ತದೆ. ಅವರಿಬ್ಬರಿಗೂ ಅರಿವಿಗೆ ಬಾರದಂತೆ ಕಲಿಕೆಯಲ್ಲದ ಸಮಯದಲ್ಲೂ
ಸೌಹಾರ್ದತೆ ಕುಂಠಿತವಾಗುತ್ತಿರುತ್ತದೆ.
ಇದು ಮುಂದುವರೆದರೆ ತಾಯಿ ತನ್ನ ಮಗುವಿನ ಜೊತೆಯಾಗಿ ಕುಳಿತುಕೊಂಡು ಮಾತನಾಡಲೂ ಆಗದಂತ
ಪರಿಸ್ಥಿತಿ ನಿರ್ಮಾಣವಾಗಬಹುದು. ಅದರಿಂದ ತಾಯಿ ತನ್ನ ಪ್ರಾಥಮಿಕ ಕರ್ತವ್ಯಗಳನ್ನು
ಯಶಸ್ವಿಯಾಗಿ ಪೂರೈಸಲೂ ಸಾಧ್ಯವಾಗದೇ ಅಸಹಾಯಕಳಾಗುತ್ತಾಳೆ.
ಇಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ ಮಗುವಿನ ಸಂಪೂರ್ಣ ಆರೈಕೆ ತಾಯಿಯ ಮೊದಲ
ಆದ್ಯತೆಯಾಗಿರುತ್ತದೆ. ಮೇಲೆ ತಿಳಿಸಿದ ಸಂದರ್ಭಗಳು ಉಂಟಾದರೆ ತಾಯಿ ಓದಿನೆಡೆಗೆ
ಹೆಚ್ಚು ಗಮನ ನೀಡಲಾರಂಭಿಸುತ್ತಾಳೆ. ಆಗ ಮಗುವಿನ ಆರೋಗ್ಯದ ಕಡೆಗೆ ಹೆಚ್ಚು ಒತ್ತು
ನೀಡಲಾಗುವುದಿಲ್ಲ.
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಹೆಚ್ಚು ವಿದ್ಯೆ ಪಡೆದು ನಾನಾ ಕ್ಷೇತ್ರಗಳಲ್ಲಿ
ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದರಿಂದ ಪಡೆದ ಜ್ಞಾನದ ಫಲವಾಗಿ
ಆಕೆ ಮಗುವಿನ ಕಲಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಉತ್ತಮ
ಶಿಕ್ಷಕಿಯಾಗುತ್ತಿದ್ದಾಳೆ.
ಅದರ ಜೊತೆಜೊತೆಯಲ್ಲಿ ಉತ್ತಮ ತಾಯಿಯಾಗುವುದರಲ್ಲಿ ಹಿಂದೆ ಬೀಳುತ್ತಿದ್ದಾಳೆ.
ಮಗು ಆತಂಕ, ಉದ್ವೇಗ, ನೋವು, ಭಯ, ದುಃಖದ ಸನ್ನಿವೇಶದಲ್ಲಿ ನೇರವಾಗಿ ತಾಯಿಯ
ಮಡಿಲಿನಲ್ಲಿ ಸೇರಿ ಅದರಿಂದ ಮುಕ್ತವಾಗುವ ದಾರಿ ಕಾಣುತ್ತಿತ್ತು. ಆದರೆ ಇಂದು ತಾಯಿ
ಬರಿ ಶಿಕ್ಷಕಿ ಮಾತ್ರ ಆಗುತ್ತಿರುವುದರಿಂದ ಮಗುವಿಗೆ ಬೇರೆ ದಾರಿ ಕಾಣದೆ ಅತಂತ್ರವಾಗಿ
ಒದ್ದಾಡುವಂತಾಗಿದೆ. ಇದರ ದೂರಗಾಮಿ ಪರಿಣಾಮ ಊಹಿಸಲು ಅಸಾಧ್ಯ.
ಕೆಲವು ಕಡೆ ಮಾತ್ರ ಅಪರೂಪ ಎನ್ನಿಸುವಂತೆ ತಾಯಿ ಮತ್ತು ಶಿಕ್ಷಕಿಯಾಗಿ ಎರಡು
ಪಾತ್ರವನ್ನು ಅರ್ಥಪೂರ್ಣವಾಗಿ ನಿಭಾಯಿಸುವ ಮಹಿಳೆಯರನ್ನು ಕಾಣಬಹುದು. ಆದರೆ ಇಂಥವರ
ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದರಿಂದಾಗಿ ಇಂದು ಹೆಚ್ಚಾಗಿ ಶಿಕ್ಷಕಿಯಾದ
ತಾಯಿಯನ್ನು ಕಾಣುವಂತಾಗಿದೆ.
ಕೆಲವು ತಾಯಂದಿರು ಎಕ್ಸ್‌ಲೆಂಟ್ ಎನ್ನುವಷ್ಟರ ಮಟ್ಟಿಗೆ ಮಗುವಿಗೆ ಶಿಕ್ಷಕಿಯಾಗಿ
ಬಿಡುತ್ತಾರೆ. ಅದರಿಂದ ಮಗು ಶಾಲೆಯ ಕಲಿಕಾ ಚಟುವಟಿಕೆಯಲ್ಲಿ ನಿರಾಸಕ್ತಿ
ಬೆಳೆಸಿಕೊಳ್ಳುತ್ತದೆ. ಏಕೆಂದರೆ ಹೇಗಿದ್ದರೂ ತಾಯಿ ಮನೆಯಲ್ಲಿ ಎಲ್ಲವನ್ನೂ
ಹೇಳಿಕೊಡುತ್ತಾಳೆ ಎಂಬ ಭಾವನೆ ಬಂದು, ತಾಯಿಯನ್ನೇ ಸಂಪೂರ್ಣವಾಗಿ
ಅವಲಂಬಿಸಿಬಿಡುತ್ತದೆ.
ಇದು ಕೆಳ ಹಂತದ ತರಗತಿಯಲ್ಲಿ ಯಶಸ್ಸನ್ನು ನೀಡುತ್ತದೆ. ಮುಂದೆ ಸಾಗಿದಂತೆ ಉನ್ನತ
ಹಂತಕ್ಕೆ ಸಾಗಿದಂತೆ ತಾಯಿಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಆಕೆ ಅಸಹಾಯಕಳಾಗುತ್ತಾಳೆ.
ಅಂಥ ಪರಿಸ್ಥಿತಿಯಲ್ಲಿ ಮಗು ಕಲಿಕೆಯಲ್ಲಿ ಸಂಪೂರ್ಣ ವಿಫಲವಾಗುವ ಸಾಧ್ಯತೆ
ಹೆಚ್ಚಿರುತ್ತದೆ. ಹಾಗಾಗಿ ಶಿಕ್ಷಣವು ಮಗುವಿನ ಸ್ವಕಲಿಕೆಯನ್ನು ನೀರೆರೆದು ಬೆಳೆಸಬೇಕೆ
ವಿನಾ ಪರಾವಲಂಬಿಯಾಗುವಂತೆ ಮಾಡಬಾರದು.
ಏನು ಮಾಡಬೇಕು?
ಮಕ್ಕಳಿಗೆ ಕಲಿಸಲು ಆಸಕ್ತಿ ಇಲ್ಲದಿದ್ದರೆ ತೊಡಗಿಕೊಳ್ಳಬೇಡಿ. ಅದಕ್ಕೆ ಬೇರೆ
ಶಿಕ್ಷಕಿಯನ್ನು ನೇಮಕಮಾಡಿಕೊಳ್ಳುವುದು ಉತ್ತಮ. ನೀವು ತಾಯಿ ಮಾತ್ರ ಆಗಿ ನಿಮ್ಮ
ಪಾತ್ರದಲ್ಲಿ ಯಶ ಕಾಣಿರಿ.
ಮಗುವಿನ ಕಲಿಕೆಯಲ್ಲಿ ನಿಮಗೆ ಆಸಕ್ತಿ-ಉತ್ಸಾಹ ಇದ್ದರೆ ಸಂತಸದಿಂದ ತೊಡಗಿಕೊಳ್ಳಿ..
ಆದರೆ ನಿಮ್ಮ ಮಗು ನಿಮ್ಮನ್ನೇ ಸಂಪೂರ್ಣ ಅವಲಂಬಿಸದಂತೆ ಎಚ್ಚರವಹಿಸಬೇಕು. ಅಂದರೆ ಮಗು
ಕಾಲಕ್ರಮೇಣ ಸ್ವಕಲಿಕೆ ಮಾಡುವಂತೆ ಸದಾ ಪ್ರೋತ್ಸಾಹಿಸುತ್ತಿರಿ.
ಕೆಲಸ ನಿರ್ವಹಿಸುತ್ತಿರುವ ಮಹಿಳೆಯಾದರೆ ನೀವು ಪಾದರಸದಂತೆ ಕೆಲಸ
ಮಾಡುತ್ತಿರಬೇಕಾಗುತ್ತದೆ. ಮನೆ ಕೆಲಸ, ಕಚೇರಿ ಕೆಲಸದ ನಂತರ ಮಗುವಿಗೆ ತಾಯಿ,
ಶಿಕ್ಷಕಿಯಾಗಬೇಕಾಗುತ್ತದೆ.
ಇವುಗಳಲ್ಲಿ ಯಶ ಸಾಧಿಸಿದವರನ್ನು ‘ಸೂಪರ್ ವುಮನ್’ ಎನ್ನಬಹುದು. ಆದರೆ ಎಲ್ಲರಿಗೂ ಉದು
ಸಾಧ್ಯವಿಲ್ಲ. ಎರಡು ದೋಣಿಗಳ ಮೇಲೆ ಕಾಲಿಟ್ಟು ಪಯಣಿಸುವ ಸಾಹಸಕ್ಕೆ ಇಳಿಯುವುದು ಬೇಡ.
ನಿಮಗೂ ಕೆಲವು ವ್ಯಾಪ್ತಿಗಳಿವೆ ಎಂಬುದನ್ನು ಮನಗಾಣಿರಿ. ಅದನ್ನು ಮೀರಿ ಮುಂದುವರೆದರೆ
ಯಾವುದರಲ್ಲೂ ಯಶ ಸಿಗದೆ ನಿರಾಶೆ ಮಡುವಿನಲ್ಲಿ ಬೀಳುತ್ತೀರಿ.
ತಾಯಿ ಮೊದಲು ತನ್ನ ಸಾಮರ್ಥ್ಯವನ್ನು ಗುರುತಿಸಿ ಕಂಡುಕೊಳ್ಳಬೇಕು. ಅದನ್ನು ಮುಕ್ತ
ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಯಾಕೆಂದರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ.
‘ಸೂಪರ್ ವುಮನ್’ ಆಗಲು ಹೋಗಿ ಸುಮಧುರ ಬಾಂಧವ್ಯವನ್ನು ಕಳೆದುಕೊಳ್ಳುವುದರಲ್ಲಿ
ಅರ್ಥವಿಲ್ಲ. ಈಗ ನಿಮ್ಮ ಅಂಗಳದಲ್ಲೇ ಚೆಂಡಿದೆ. ನೀವು ಸೂಪರ್ ವುಮನ್ ಆಗಬೇಕೆ ? ಉತ್ತಮ
ಬಾಂಧವ್ಯ ಉಳಿಸಿಕೊಳ್ಳಬೇಕೆ ? ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಜಪಾನ್ ದೇಶದ ಕಲಿಕೆ ಕುರಿತ ತಾಯಿ ಮಗುವಿನ ಬಗ್ಗೆ ಹೇಳುವುದಾದರೆ, ಅಲ್ಲಿ ಪ್ರತಿ
ಮಗುವೂ ಶಾಲೆಗೆ ಹೋಗುವ ಮುನ್ನ ಇಲ್ಲವೇ ಶಾಲೆ ಬಿಟ್ಟ ನಂತರ ದಿನಾಲೂ 20 ನಿಮಿಷ ತಾಯಿ
ಎದುರು ಏನನ್ನಾದರೂ ಓದಲೇಬೇಕು.
ತಾಯಿ ಮಗು ಓದಿದ್ದನ್ನು ಆಲಿಸಿ, ತಪ್ಪಿದ್ದಲ್ಲಿ ತಿದ್ದುತ್ತಾಳೆ. ಕೆಲ ಸಾರಿ ಆ
ಓದಿಗೆ ಪೂರಕ ಅಂಶಗಳನ್ನೂ ಹೇಳುತ್ತಾಳೆ. ಇದು ಇಬ್ಬರ ಜ್ಞಾನ ವಿಸ್ತಾರಕ್ಕೆ
ನೆರವಾಗುತ್ತದೆ. ಮಗುವಿನ ಓದಿನ ಮಟ್ಟ ಮನೆಯವರಿಗೆ ಅರಿವಾಗುತ್ತದೆ. ಮಕ್ಕಳಿಗೆ ಚಿಕ್ಕ
ವಯಸ್ಸಿನಲ್ಲೇ ಸ್ಪಷ್ಟ ಕಲಿಕೆಗೆ ಅವಕಾಶ ನೀಡುವುದು ಉತ್ತಮ.
ಮಕ್ಕಳ ಕಲಿಕೆಯಲ್ಲಿ ತಾಯಂದಿರು ಕುಟುಂಬದವರ ನೆರವು ಪಡೆಯಬೇಕು. ಆಗ ನಿರೀಕ್ಷಿತ
ಮಟ್ಟದಲ್ಲಿ ಫಲ ಕಾಣಬಹುದು.
No comments:
Post a Comment