ಪರೀಕ್ಷೆ ಬದುಕಿನ ಭಾಗವಷ್ಟೇ…
Wednesday, 26.04.2017, 3:00 AM ವಿಜಯವಾಣಿ ಸುದ್ದಿಜಾಲ
|ಪರಮೇಶ್ವರಯ್ಯ ಸೊಪ್ಪಿಮಠ
ಈಗ ಎಲ್ಲ ಪರೀಕ್ಷೆಗಳು ಮುಗಿದಿದ್ದು, ಇನ್ನೇನಿದ್ದರೂ ಆ ಪರೀಕ್ಷೆಗಳ ಫಲಿತಾಂಶ ನಿರೀಕ್ಷಿಸುವ ಸಮಯ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಂತ ಅವರ ಪಾಲಕರಿಗೇ ಹೆಚ್ಚು ಆತಂಕ, ನಿರೀಕ್ಷೆ. ಇದು ಎಲ್ಲರಲ್ಲೂ ಸಹಜವಾದರೂ ವಿದ್ಯಾರ್ಥಿಗಳನ್ನು ಇನ್ನಷ್ಟು ಒತ್ತಡಕ್ಕೆ ದೂಡುವುದು ಸತ್ಯ. ಇದರ ಪರಿಣಾಮ ಪರೀಕ್ಷೆಯಲ್ಲಿ ಪಾಸಾಗುವುದಷ್ಟೇ ಜೀವನವೆಂಬ ಭಾವನೆ ಹದಿಹರೆಯದವರಲ್ಲಿ ಮೂಡುತ್ತದೆ.
ಹೀಗಿದ್ದಾಗ ಪರೀಕ್ಷೆ ಹಾಗೂ ಅವುಗಳ ಫಲಿತಾಂಶಗಳು ನಮ್ಮ ಬದುಕಿನ ಒಂದು ಭಾಗವಷ್ಟೇ ಎಂಬುವುದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಪಾಲಕರು ಮಕ್ಕಳ ಫಲಿತಾಂಶ ನಿರೀಕ್ಷಿಸಿದಷ್ಟು ಬಂದಿಲ್ಲದಿದ್ದರೆ ಆತಂಕಕ್ಕೆ ಒಳಗಾಗಬಾರದು ಮತ್ತು ಮಕ್ಕಳನ್ನೂ ಆತಂಕಕ್ಕೆ ದೂಡಬಾರದು. ಇಲ್ಲದಿದ್ದರೆ ಅದು ಯಾವುದೋ ಒಂದು ಕೆಟ್ಟ ನಿರ್ಧಾರಕ್ಕೆ ದಾರಿಯಾಗಬಹುದು. ಆದರೆ ಈ ನಿಟ್ಟಿನಲ್ಲಿ ವಾಸ್ತವ ಅರಿಯದೆ ಇರುವುದರಿಂದ ಅನೇಕ ಅನಾಹುತಗಳಿಗೆ ನಾವಿಂದು ಸಾಕ್ಷಿಯಾಗುತ್ತಿದ್ದೇವೆ. ಅದರಿಂದ ಹೊರಬರಲು ಪಾಲಕರು, ವಿದ್ಯಾರ್ಥಿಗಳು ಒಂದಷ್ಟು ವಾಸ್ತವ ಅರಿತರೆ ಒಳಿತು.
ಮುಕ್ತ ಮನಸ್ಸಿನಿಂದ ಸ್ವೀಕರಿಸಿ: ಈ ಏಪ್ರಿಲ್-ಮೇ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಫಾಸು-ಪೇಲಿನ ಅವಧಿ. ಎಸ್ಎಸ್ಎಲ್ಸಿ, ಪಿಯುಸಿ, ಸಿಇಟಿ, ಕಾಮೆಡ್ ಕೆ, ಐ.ಐ.ಟಿ. ಇತ್ಯಾದಿಗಳ ಫಲಿತಾಂಶವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮಕ್ಕಳ ಸಂಖ್ಯೆ ತುಂಬ ಕಡಿಮೆ. ನನಗೆ ಇಂತಹ ಪ್ರತಿಷ್ಠಿತ ಕಾಲೇಜಿನಲ್ಲಿಯೇ ಪ್ರವೇಶ ಸಿಗುತ್ತದೆ ಎಂಬುದನ್ನು ತಲೆ ತುಂಬ ತುಂಬಿಕೊಂಡಿರುತ್ತಾರೆ. ಒಂದು ವೇಳೆ ಕಡಿಮೆ ಫಲಿತಾಂಶ ಬಂದಾಗ ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಾರೆ.
ಒತ್ತಡ ಬೇಡ: ಅತ್ಯಧಿಕ ಅಂಕ ಗಳಿಸಬೇಕು. ಅತ್ಯುನ್ನತ ಗ್ರೇಡ್ಗಳನ್ನು ಸಂಪಾದಿಸಬೇಕೆಂಬ ಒತ್ತಡ ಇಂದಿನ ಹಲವು ವಿದ್ಯಾರ್ಥಿಗಳ ಮೇಲಿದೆ. ಈ ಪರಿಸ್ಥಿತಿಗೆ ಪಾಲಕರ ಮಿತಿಮೀರಿದ ಆಕಾಂಕ್ಷೆ ಹಾಗೂ ಅವರು ಮಕ್ಕಳ ಮೇಲೆ ಹೇರಿದ ಒತ್ತಡ ಕಾರಣ. ಇದಕ್ಕೆಲ್ಲ ಪರೀಕ್ಷೆಯನ್ನು ನಾವು ನೋಡುವ, ಅದರಲ್ಲಿ ಅನುತ್ತೀರ್ಣರಾದರೆ ಜೀವನವೇ ಮುಗಿದು ಹೋಯಿತು ಎಂಬಂತೆ ನಡೆದುಕೊಳ್ಳುವ ನಮ್ಮ ವರ್ತನೆಗಳೇ ಕಾರಣ. ಇವು ವಿದ್ಯಾರ್ಥಿ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರುತ್ತವೆ. ಪೋಷಕರಿಗಿಂತ ಕೆಟ್ಟ ಮನಸ್ಥಿತಿಯಲ್ಲಿ ಮಕ್ಕಳಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ತೀರ್ವನಗಳು ಅಹಿತಕರ ಮತ್ತು ಕಟುವಾಗಿರುತ್ತವೆ. ಅನ್ಯರ ತಪ್ಪುಗಳನ್ನು ನಾವು ಭೂತಕನ್ನಡಿ ಹಿಡಿದು ನೋಡುತ್ತೇವೆ. ಇದರಿಂದಾಗಿ ಬೇರೆಯವರಿಗೆ ನನ್ನ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ಬೇರೆಯವರು ನನ್ನನ್ನು ಮೆಚ್ಚುವುದಿಲ್ಲ ಎಂಬ ಭಾವನೆ ಸುಲಭವಾಗಿ ಹದಿಹರೆಯದವರಲ್ಲಿ ಬೆಳೆಯುತ್ತಿದೆ. ಇದು ಆತಂಕ ಹಾಗೂ ಕೀಳರಿಮೆ ಉಂಟುಮಾಡುತ್ತದೆ. ಬದುಕು ಕ್ರೂರವಾಗಿ, ಜಗತ್ತೇ ತನ್ನ ವಿರುದ್ಧ ಇರುವಂತೆ ಕಾಣಿಸಿ ಒಂಟಿತನ ಮನೆ ಮಾಡುತ್ತದೆ. ಸೂಕ್ಷ್ಮಮನಸ್ಸು ತನ್ನ ಸಫಲತೆ, ವಿಫಲತೆಗೆ ತಾನೇ ಕಾರಣ ಎಂದು ಪೂರ್ಣ ಜವಾಬ್ದಾರಿ ಹೊತ್ತು ತನ್ನನ್ನೇ ನಾಶ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದುಬಿಡುವಂತೆ ಮಾಡುತ್ತದೆ.
ಕೌಶಲಕ್ಕೂ ಇದೆ ಪ್ರಾಮುಖ್ಯತೆ: ಇಂದು ಪ್ರತಿಯೊಂದು ಕ್ಷೇತ್ರವೂ ಖಾಸಗೀಕರಣ ಗೊಳ್ಳುತ್ತಿರುವುದರಿಂದ ಶೈಕ್ಷಣಿಕ ರಂಗವೂ ಬದಲಾಗಿದೆ. ಪದವಿಯಲ್ಲಿ ಪಡೆದ ಅಂಕಗಳ ಜತೆಗೆ ವಿದ್ಯಾರ್ಥಿಗಳ ಸಾಮರ್ಥ್ಯ್ಕನುಗುಣವಾಗಿ ಉದ್ಯೋಗಗಳು ಹುಟ್ಟಿಕೊಳ್ಳುತ್ತಿವೆ. ಪದವಿಯಲ್ಲಿ ಶೇ.60ರ ಫಲಿತಾಂಶ ತೆಗೆದ ವಿದ್ಯಾರ್ಥಿ ಸಂದರ್ಶನಗಳಲ್ಲಿ ಹೆಚ್ಚುವರಿ ಕೌಶಲ ಪ್ರದರ್ಶಿಸಿದರೆ, 90 ಅಂಕ ಪಡೆದ ವಿದ್ಯಾರ್ಥಿಗಿಂತ ಹೆಚ್ಚಿನ ಹುದ್ದೆ ಪಡೆಯಬಲ್ಲ. ಹೀಗಾಗಿ ವಿದ್ಯಾರ್ಥಿಗಳು ಓದಿನ ಜತೆಗೆ ಬದ್ಧತೆ, ಪ್ರಾಮಾಣಿಕತೆ, ಕೌಶಲವೃದ್ಧಿಗೂ ಆದ್ಯತೆ ನೀಡಬೇಕು. ಪಿಯುಸಿ, ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಪಡೆದ ಹಾಗೂ ಫೇಲ್ ಆದ ಮಕ್ಕಳಿಗೂ ಉದ್ಯೋಗಾವಕಾಶಗಳಿವೆ. ಅದಕ್ಕೆ ಗುರಿ ಹಾಗೂ ಪ್ರಯತ್ನ ಅವಶ್ಯವಾಗಿದ್ದು, ಅದು ಯೋಜನಾಬದ್ಧವಾಗಿರಬೇಕಷ್ಟೇ. ನಿಮ್ಮ ಭವಿಷ್ಯವನ್ನು ಯಾರೂ ರೂಪಿಸಲಾರರು. ಎದುರಾಗುವ ಸವಾಲುಗಳಿಗೆ ಅಂಜದೆ ಮುನ್ನುಗ್ಗಿದಲ್ಲಿ ಸಾಧನೆ ಸುಲಭವಾಗುತ್ತದೆ.
ನಿರೀಕ್ಷೆ ತರದಿರಲಿ ನಿರಾಸೆ: ಎಲ್ಲ ಮಕ್ಕಳೂ ಎಲ್ಲ ವಿಷಯಗಳಲ್ಲೂ ಮೊದಲಿಗರಾಗುವುದು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಶೈಕ್ಷಣಿಕವಾಗಿ ಯಶಸ್ವಿಯಾಗಲಾರರು. ಆದರೆ ಬಹಳಷ್ಟು ಸಲ ಅಂಕಗಳಿಕೆಯಲ್ಲಿ ಕೊಂಚ ಹಿಂದೆ ಬಿದ್ದರೂ ಹೋಲಿಕೆ, ನಿಂದನೆಯ ಮಾತು ಕೇಳುವಂತಾಗುತ್ತದೆ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ್ಕತ ಅಂಕಪಟ್ಟಿ ನೋಡಿಯೇ ಬೌದ್ಧಿಕ ಮಟ್ಟ ಗುರುತಿಸಲಾಗುತ್ತದೆ. ಅನೇಕ ವಿಜ್ಞಾನಿಗಳು, ರಾಜಕಾರಣಿಗಳು, ನಟರು, ಆಟಗಾರರನ್ನು ಮಾದರಿಯಾಗಿಸಿಕೊಳ್ಳುವ ನಮ್ಮ ಯುವ ಜನತೆ ಅವರ ಬದುಕನ್ನೂ ಗಮನಿಸಬೇಕು. ಅವರೂ ಅನೇಕ ಸಾರಿ ವಿಫಲರಾಗಿರುತ್ತಾರೆ. ಆದರೆ ಅದಕ್ಕೆ ಅಂಟಿ ಕೊಳ್ಳದೆ ಅದು ನಮ್ಮ ತಾತ್ಕಾಲಿಕ ಹಿನ್ನಡೆ ಎಂದು ಪರಿಗಣಿಸಿ ನಂತರ ಕ್ರಿಯಾಶೀಲತೆ, ಕಠಿಣ ಶ್ರಮದಿಂದ ಯಶಸ್ಸು ಸಾಧಿಸುತ್ತಾರೆ. ಇಂತಹ ಮಾದರಿಗಳನ್ನು ಮಕ್ಕಳು ಅರಿಯಬೇಕು, ಪಾಲಕರು ತಿಳಿಯಬೇಕು.
ಸ್ಥೈರ್ಯ ತುಂಬಿ: ನಿಮ್ಹಾನ್ಸ್ ಅಧ್ಯಯನವೊಂದರ ಪ್ರಕಾರ ಮುಂಬೈಯ 16% ವಿದ್ಯಾರ್ಥಿಗಳು ಖಿನ್ನತೆಯಿಂದ ನರಳುತ್ತಾರೆ. ಅವರಲ್ಲಿ 8% ವಿದ್ಯಾರ್ಥಿಗಳಿಗೆ ಆತ್ಮಹತ್ಯೆಯ ಯೋಚನೆಯೂ ಬಂದು ಹೋಗುತ್ತದೆ. 12-18 ವಯೋಮಾನದವರ ಆತ್ಮಹತ್ಯೆಗೆ 99% ಕಾರಣ ಶೈಕ್ಷಣಿಕ ಒತ್ತಡ. ಈ ಹಿನ್ನಲೆಯಲ್ಲಿ ಮಕ್ಕಳ ಬಾಲ್ಯವನ್ನು, ಅವರ ಮುಗ್ಧ ಲೋಕವನ್ನು ಎಷ್ಟರ ಮಟ್ಟಿಗೆ ಉಳಿಸಿದ್ದೇವೋ, ಎಷ್ಟು ಕಸಿದುಕೊಂಡಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಹೀಗಾಗಿ ಆತಂಕ ಎದುರಿಸುವ ವಿದ್ಯಾರ್ಥಿಗಳ ಸಹೋದರರು, ಸ್ನೇಹಿತರು ಅವರಿಗೆ ಅಗತ್ಯವಾಗಿ ಮಾನಸಿಕ ಬೆಂಬಲ ನೀಡಬೇಕು.