Sunday, December 15, 2013

ಓದು-ಯಾಕೆ-ಹೇಗೆ? ಲೇಖನ.ಈ ದಿನದ ಪ್ರಜಾವಾಣಿಯಲ್ಲಿ (16/12/13)





ಓದು ಯಾಕೆ? ಹೇಗೆ

ದು ಒಂದು ವಿಶಿಷ್ಟ ಪ್ರಪಂಚ.  ಅಲ್ಲಿ ಕವಿಗಳು ಓದುಗನನ್ನು ಒಲವಿನ ಲೋಕಕ್ಕೆ ಕರೆದೊಯ್ಯಬಲ್ಲರು; ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡಬಲ್ಲರು; ಕಾದಂಬರಿಕಾರರು ಬದುಕಿನ ಪರಿಚಯ ಮಾಡಿಕೊಡಬಲ್ಲರು; ಅನ್ವೇಷಕರು ನೆಲ– ಜಲಗಳ ಅದ್ಭುತ ಅನ್ವೇಷಣೆ, ಸಾಹಸಗಳನ್ನು ಹೇಳಬಲ್ಲರು; ವಿಜ್ಞಾನಿಗಳು ಪ್ರಕೃತಿಯಲ್ಲಿ ಹುದುಗಿರುವ ವೈಜ್ಞಾನಿಕ ಸತ್ಯಗಳನ್ನು ತಿಳಿಸಿಕೊಡಬಲ್ಲರು;
ಚರಿತ್ರಕಾರರು ಮಹನೀಯರ ಬದುಕಿನ ದರ್ಶನ ಮಾಡಿಕೊಡಬಲ್ಲರು; ಇತಿಹಾಸಕಾರರು ಆಗಿ ಹೋದ ಘಟನೆಗಳನ್ನು ಪುನಃ ಕಣ್ಣಿಗೆ ಕಟ್ಟುವಂತೆ ಬಣ್ಣಿಸಬಲ್ಲರು, ಮುಂದಾಗಬಹುದಾದ ಘಟನೆಗಳ ಇಣುಕು ನೋಟವನ್ನೂ ಒದಗಿಸಬಲ್ಲರು; ದಾರ್ಶನಿಕರು ಬದುಕಿನ ಅರ್ಥಪೂರ್ಣತೆಯ ಪ್ರಜ್ಞೆ ತಂದುಕೊಡಬಲ್ಲರು... ಹಾಲ್‌ಬ್ರೂಕ್‌ ಜಾಕ್ಸನ್– (ತಮ್ಮ ‘ದಿ ಜಾಯ್ ಆಫ್ ರೀಡಿಂಗ್’ ಪುಸ್ತಕದಲ್ಲಿ)
ಶಾಲಾ ದಿನಗಳಲ್ಲೇ ಅತ್ಯಂತ ಹೆಚ್ಚು ಪುಸ್ತಕ ಓದುತ್ತಿದ್ದ, ನಸು ನಾಚಿಕೆ ಸ್ವಭಾವದ, ಎಲ್ಲ ಪರೀಕ್ಷೆಗಳಲ್ಲೂ ಟಾಪರ್ ಆಗಿರುತ್ತಿದ್ದ ಮಂಗಳೂರಿನ ಹುಡುಗ ಅರವಿಂದ ಅಡಿಗ ಬುಕರ್‌ ಪ್ರಶಸ್ತಿ ಗಳಿಸುವಲ್ಲಿ ಸಫಲರಾದರು.
ಓದು ಎಂದರೆ...
     ಒಂದು ಅಕ್ಷರವನ್ನು ಶಬ್ದದೊಂದಿಗೆ ಅದಕ್ಕೆ ಇರುವ ಸಂಬಂಧವನ್ನು ಊಹಿಸಿ ಅರ್ಥ ಮಾಡಿಕೊಳ್ಳು­ವುದೇ ಓದು. ಬರಹವನ್ನು ಓದುವುದಷ್ಟೇ ಓದಲ್ಲ. ಅಲ್ಲಿರುವ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಓದಿನಲ್ಲಿ ಸೇರಿದೆ. ಹಾಗಾಗಿ ಇಲ್ಲಿ ಗುರುತಿಸುವಿಕೆಯ ಜೊತೆಗೆ ಗ್ರಹಿಕೆಯೂ ಪ್ರಧಾನ ಪಾತ್ರ ವಹಿಸುತ್ತದೆ.
ಓದು ನಾಲ್ಕು ಹಂತಗಳಲ್ಲಿ ಸಾಗುತ್ತದೆ.
1. ಸಂಕೇತಗಳ ಗುರುತಿಸುವಿಕೆ (ಅಕ್ಷರ, ಚಿಹ್ನೆ, ಚಿತ್ರಗಳು)
2. ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದು.
3. ಸಂಕೇತಗಳ ವ್ಯತ್ಯಾಸ ಗುರುತಿಸುವುದು.
4. ಪದ/ ಶಬ್ದಗಳ ವಿಶ್ಲೇಷಣೆ
ಬಾಲ್ಯದಲ್ಲೇ ಓದು ಯಾಕೆಂದರೆ...
ಚಿಕ್ಕ ಪ್ರಾಯದ ಮಕ್ಕಳಿಗೆ ಕಲಿಸುವುದು ಸರಳ ಮತ್ತು ಸುಮಧುರ. ಮಕ್ಕಳು ಸುಲಭವಾಗಿ ಮಾಹಿತಿಗಳನ್ನು ಗ್ರಹಿಸಬಲ್ಲರು ಹಾಗೇ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳ­ಬ­ಲ್ಲರು. ಚಿಕ್ಕ ವಯಸ್ಸಿನಲ್ಲಿ ಕಲಿಯುವ ಆಸಕ್ತಿ ಅಧಿಕವಾ­ಗಿ­ರುತ್ತದೆ. ಬಾಲ್ಯದಲ್ಲೇ ಓದನ್ನು ಕಲಿತ ಮಕ್ಕಳು ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಬಲ್ಲರು. ಅಂದರೆ, ಅಂತಹ ಮಕ್ಕಳು ಉಳಿದ ಮಕ್ಕಳಿಗಿಂತ ವೇಗವಾಗಿ ಓದ­ಬಲ್ಲರು, ಸುಲಭವಾಗಿ ಗ್ರಹಿಸಬಲ್ಲವರಾಗಿರುತ್ತಾರೆ.
ಓದಲು ನಿರುತ್ಸಾಹವೇ?: ಮಕ್ಕಳಿಗೆ ಓದುವಿಕೆಯ ಸುಸಜ್ಜಿತ ಚೌಕಟ್ಟು ನೀಡುವುದು ಶಾಲೆ. ಮನೆಯಲ್ಲೂ  ಮಗು ಓದುತ್ತದೆ ಎಂದಾದರೂ ಅದಕ್ಕೆ ನಿರ್ದಿಷ್ಟ ಬೆಲೆ ಸಿಗುವುದು ಶಾಲೆಗಳಲ್ಲಿ. ಅದರಿಂದಾಗಿ, ಮಕ್ಕಳು ಓದಿನಲ್ಲಿ ಆಸಕ್ತಿ ತಾಳುತ್ತಿಲ್ಲ ಎಂಬ ಕೂಗು ಪ್ರಾರಂಭವಾಗುವುದು ಶಾಲೆಯಲ್ಲಿ. ಗುರುಗಳು ಪಠ್ಯವನ್ನು ಓದಲು ಹೇಳಿದಾಗ ಮಕ್ಕಳು ಸರಿಯಾಗಿ ಓದುವುದಿಲ್ಲ, ಇಲ್ಲವೇ ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ. ಕೆಲ ಮಕ್ಕಳು ಪಠ್ಯವನ್ನು ಯಶಸ್ವಿಯಾಗಿ ಓದಿದರೂ ಇತರ (ಪತ್ರಿಕೆ, ಪುಸ್ತಕ...) ಓದಿನಲ್ಲಿ ಎಡವುತ್ತಾರೆ. ಇದಕ್ಕೆ ಕಾರಣಗಳೇನು ಎಂಬ ಪ್ರಶ್ನೆ ತಕ್ಷಣ ನಮ್ಮ ಮನದಲ್ಲಿ ಮೂಡುತ್ತದೆ.
ಅದಕ್ಕೆ ಉತ್ತರ ಹುಡುಕುತ್ತಾ ಹೋದರೆ ಅನೇಕ ಅಂಶಗಳು ದೊರೆಯುತ್ತವೆ. ಅವುಗಳಲ್ಲಿ ಪ್ರಮುಖವಾದವು:
* ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ನಿರ್ಲಕ್ಷಿಸಿರುವುದು.
* ಮಕ್ಕಳಿಗೆ ವರ್ಣಮಾಲೆ/ ಕಾಗುಣಿತದ ಸ್ಪಷ್ಟತೆ ಇಲ್ಲದಿರುವುದು.
* ಶಿಕ್ಷಕರಿಗೆ ಭಾಷಾ ಕೌಶಲದಲ್ಲಿ ಅನಾಸಕ್ತಿ.
* ಮಕ್ಕಳಿಗೆ ವಿವರಿಸುವ ರೀತಿ, ಪ್ರಶ್ನೆ ಕೇಳುವ ವಿಧಾನ, ಓದುವುದರ ಮಹತ್ವ ತಿಳಿಯದಿರುವುದು.
* ವೃತ್ತಿಗೆ ಸೇರುವ ಮುಂಚೆ ಪಡೆಯುವ ತರಬೇತಿ­ಯಲ್ಲಿ ಓದಿಗೆ ಹೆಚ್ಚು ಒತ್ತು ನೀಡದಿರುವುದು.
* ಸೇವಾ ಅವಧಿಯ ತರಬೇತಿಯಲ್ಲಿ ಮಾಹಿತಿ ಸಿಗದಿರುವುದು.
* ಪಠ್ಯಪುಸ್ತಕಗಳಲ್ಲಿ ಓದುವಿಕೆಯನ್ನು ಸರಿಯಾದ ಕ್ರಮದಲ್ಲಿ ವಿವರಿಸದೇ ಅಸಂಬದ್ಧವಾಗಿ ರೂಪಿಸಿರುವುದು.
* ಅಸಂಬದ್ಧ ಕಲಿಕಾ ವಿಧಾನಗಳು.
  ಭಾಷೆಯ ಕಲಿಕೆಯಲ್ಲಿ ಓದು ಅತ್ಯಂತ ಪ್ರಮುಖವಾದದ್ದು. ಮಕ್ಕಳು ಓದನ್ನು ಆನಂದದಿಂದ ಅನುಭವಿಸಬೇಕು. ನಮ್ಮ ಪಠ್ಯಪುಸ್ತಕಗಳು ಸಂತಸವಾಗಿ ಓದಿಸಿಕೊಂಡು ಹೋಗುವಂತೆ ಮಾಡುವಲ್ಲಿ ಸಂಪೂರ್ಣ ಯಶಸ್ಸು ಕಂಡಿಲ್ಲ. ಮಕ್ಕಳಲ್ಲಿ ಅದನ್ನು ಬಿತ್ತಬೇಕಾದರೆ ವೈಯಕ್ತಿಕ ಓದುವಿಕೆಗೆ ಹೆಚ್ಚು ಗಮನ ನೀಡಬೇಕು. ಶಿಕ್ಷಕರೂ ಓದುವಿಕೆಯ ಮಹತ್ವ ಸಾರಲು ಮಕ್ಕಳಿಗೆ ಮಾದರಿಯಾಗಿ ಇರಬೇಕು.
ಒತ್ತಡ ಬೇಡ: ಮನೆ ಅಥವಾ ಶಾಲೆಯಲ್ಲಿ ನಾವು ಮಕ್ಕಳಿಗೆ ಸದಾ ಓದು ಎಂದು ಒತ್ತಡ ಹಾಕುತ್ತಿರು­ತ್ತೇವೆ. ಆದರೆ ಆ ಮಗು ಓದುವಿಕೆಯನ್ನು ಆನಂದಿ­ಸಲು ಸಿದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದೇ ಇಲ್ಲ. ಅಂಥ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಮಾತನ್ನು ಮೀರಿದಾಗ, ನಮ್ಮ ಮಗು ಓದುವುದೇ ಇಲ್ಲ ಎಂದು ದೂರಲು ಪ್ರಾರಂಭಿಸುತ್ತೇವೆ. ಹಾಗೆ ಮತ್ತೆ ಮತ್ತೆ ಮಗುವನ್ನು ಹೀಯಾಳಿಸುತ್ತಾ ಹೋದಂತೆ, ಅದರಲ್ಲಿ ಓದಲು ಆಸಕ್ತಿಯಿದ್ದರೂ ಅದನ್ನು ನಾವೇ ಚಿವುಟಿ ಹಾಕುತ್ತೇವೆ.
ಮಗು ಶಾಲೆಗೆ ಸೇರಿದ ನಂತರ ಕಲಿಯಲು ಪ್ರಾರಂಭಿಸುತ್ತದೆ ಎಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಆದರೆ ಇದು ಶುದ್ಧ ತಪ್ಪು. ಶಾಲೆಗೆ ಸೇರುವ ಮೊದಲೇ ಮನೆ, ವಸ್ತು, ಪರಿಸರ ಇತ್ಯಾದಿಗಳ ಬಗ್ಗೆ ಸಾಕಷ್ಟು ಕಲಿತಿರುತ್ತದೆ. ತನ್ನ ಮಟ್ಟದಲ್ಲಿ ವಿಷಯಗಳ ಸಂಗ್ರಹಣೆ ಮಾಡಿರುತ್ತದೆ. ಅದನ್ನು ನಾವು ಪರಿಗಣಿಸುವುದು ತುಂಬಾ ಕಡಿಮೆ.
ಶಿಕ್ಷಕರು ಇಲ್ಲವೇ ಪೋಷಕರು ಮಕ್ಕಳಿಗೆ ಓದು ಕಲಿಸುವ ಮುನ್ನ ಮಗುವಿನ ಕಲಿಕಾಂಶಗಳ ಬಗ್ಗೆ ಸಂಪೂರ್ಣ ವಿವರ ಪಡೆಯಬೇಕು. ಅದನ್ನು ಬುನಾದಿಯಾಗಿ ಇಟ್ಟುಕೊಂಡು ಮಕ್ಕಳಿಗೆ ಪೂರಕವಾಗುವಂತೆ ಓದನ್ನು ರೂಪಿಸಿದರೆ ಅವರು ಬಹು ಬೇಗ ಓದಿನತ್ತ ಆಕರ್ಷಿತರಾಗುತ್ತಾರೆ.
ಪ್ರಾರಂಭದಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅದನ್ನು ಪ್ರೀತಿಯಿಂದ ತಿದ್ದಬೇಕು. ಉತ್ತಮವಾದುದಕ್ಕೆ ಬೆನ್ನು ತಟ್ಟಬೇಕು. ಇದು ಉತ್ತಮ ಓದಿಗೆ ಪ್ರೇರಣೆ ನೀಡುತ್ತದೆ. ಬಹುಬೇಗ ಓದು ಕಲಿತವರು ಅದನ್ನು ಹುಟ್ಟಿನಿಂದಲೇ ಪಡೆದವರೇನಲ್ಲ. ಅವರೂ ಆರಂಭದಲ್ಲಿ ಸಾಮಾನ್ಯ ಓದುಗರು. ಶಿಕ್ಷಕರು, ಮನೆಯವರು ನೀಡಿದ ಪ್ರಶಂಸೆಗಳೇ ಅವರ ಬೆಳವಣಿಗೆಗೆ ಮೂಲ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ. ಅವರ ಕ್ರಿಯಾಶೀಲತೆಗೆ ಒಂದು ಉದಾಹರಣೆ ಎಂದರೆ, ಯಾವ ವಸ್ತುವನ್ನು ಕೊಟ್ಟರೂ ಅದು ಮೂಲ ಸ್ಥಿತಿ ಕಳೆದುಕೊಳ್ಳುತ್ತದೆ. ಸಹಜವಾಗಿ ಅವರು ಪುಸ್ತಕ, ಪತ್ರಿಕೆಗಳನ್ನು ತೆಗೆದುಕೊಂಡು ಓದಿದಂತೆ ಮಾಡುತ್ತಾರೆ. ಅವರ ಈ ಚಟುವಟಿಕೆ ಮುಂದೆ ಅವರನ್ನು ಉತ್ತಮ ಓದುಗರನ್ನಾಗಿ ಮಾಡುತ್ತದೆ. ಆದರೆ ನಾವು ಅದನ್ನು ಸ್ವೀಕರಿಸುವ ರೀತಿಯೇ ಬೇರೆ. ಮಕ್ಕಳು ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಹಿಡಿದರೆ ಅಥವಾ ಹತ್ತಿರ ಹೋದರೆ ಸಾಕು ಹಾವು ಮೈಮೇಲೆ ಬಂದಂತೆ ವರ್ತಿಸುತ್ತೇವೆ.
ಅದರಿಂದ ಆ ಪುಸ್ತಕ ಹರಿಯು­ವುದು ಇಲ್ಲವೇ ಹಾಳಾ­ಗುವುದನ್ನು ತಪ್ಪಿಸಿದ ತೃಪ್ತಿ ಮಾತ್ರ ನಮ್ಮದಾ­ಗು­ತ್ತದೆ. ಆದರೆ ಅದರಿಂದಾಗುವ ದೂರಗಾಮಿ ಪರಿ­ಣಾಮ ನಮ್ಮ ಗಮನಕ್ಕೆ ಬರುವುದಿಲ್ಲ. ಪುಸ್ತಕ­ದೊಂದಿಗೆ ಮಗು ಬೆಳೆಸಿಕೊಳ್ಳುವ ಸಂಬಂಧವನ್ನು ನಾವು ಕೊಂದುಹಾಕುತ್ತೇವೆ. ಅದು ಮುಂದುವರಿದರೆ, ಮಗು ಪುಸ್ತಕ ಕಂಡರೆ ಸಾಕು ಮಾರು ದೂರ ಸರಿ­ಯಲು ಪ್ರಾರಂಭಿಸುತ್ತದೆ. ಇದು ಮುಂದೆ ಓದಿನೆಡೆಗೆ ಅದು ಆಸಕ್ತಿ ಕಳೆದುಕೊಳ್ಳುವಂತೆ ಮಾಡುವಲ್ಲಿ ಮಹ­ತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.
ಓದಿಗೆ ಪ್ರೇರಣೆ
ನ್ಯಾಷನಲ್ ಬುಕ್ ಟ್ರಸ್ಟ್ ಆಫ್‌ ಇಂಡಿಯಾ: ಓದುವ ಹವ್ಯಾ­ಸ­ವನ್ನು ಪ್ರೋತ್ಸಾಹಿಸಲಿಕ್ಕಾಗಿಯೇ 1957ರಲ್ಲಿ ಆರಂಭವಾದ ಈ ಸಂಸ್ಥೆ, ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಪುಸ್ತಕ ಸಪ್ತಾಹ ಹಮ್ಮಿಕೊಳ್ಳುತ್ತದೆ. ದೇಶದಾದ್ಯಂತ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು, ಓದುಗರ ಕ್ಲಬ್‌ಗಳ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಬುಕ್ ಕ್ಲಬ್/ ರೀಡರ್ಸ್ ಕ್ಲಬ್ ಎಂಬ ಓದುವ ಸಂಘಗಳನ್ನು ಶಾಲೆಗಳಲ್ಲಿ ಸ್ಥಾಪಿಸಿ, ಓದುವ ಚಟುವಟಿಕೆಗೆ ಪ್ರೋತ್ಸಾಹದಾಯಕ ಬಹುಮಾನಗಳನ್ನು ನೀಡುತ್ತದೆ.  ಉಚಿತ ಪುಸ್ತಕಗಳು, ನಿಯತಕಾಲಿಕಗಳನ್ನು ಕಳುಹಿಸಿಕೊಡುತ್ತದೆ. (ಆಸಕ್ತರು National Book Trust, India, A-5, Green Park, New Delhi - 110 016 ವಿಳಾಸವನ್ನು ಸಂಪರ್ಕಿಸಿ ಪುಸ್ತಕಗಳನ್ನು ತರಿಸಿಕೊಳ್ಳಬಹುದು)     
ಅತ್ಯುತ್ಸಾಹ ಬೇಡ
ಬಾಲ್ಯದಲ್ಲಿ ಮಕ್ಕಳ ಓದಿನ ಸಮಯದಲ್ಲಿ ಶಿಕ್ಷಕರು ಹಾಗೂ ಪಾಲಕರು ಎಚ್ಚರಿಕೆಯಿಂದ ಇರಬೇಕು. ಓದುವಿಕೆಯ ಮೂಲ ನಿಯಮಗಳನ್ನು ಸರಿಯಾಗಿ ತಿಳಿದು ಪಾಲಿಸಬೇಕು. ಕಲಿಸುವ ಅತ್ಯುತ್ಸಾಹದಲ್ಲಿ ಸ್ಪಷ್ಟ ಓದು ಮೂಡದಿದ್ದರೆ ನಿರೀಕ್ಷಿತ ಫಲ ಸಿಗುವುದಿಲ್ಲ. ಓದುವುದನ್ನು ಕಲಿಸುವ ಸಮಯದಲ್ಲಿ ಮಕ್ಕಳ ವರ್ತನೆ, ವಿಷಯದ ವ್ಯಾಪ್ತಿಗಳನ್ನು ಸದಾ ಗಮನಿಸುತ್ತಿರಬೇಕು. ಇಲ್ಲದಿದ್ದರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು.
ಮಕ್ಕಳಿಗೆ ಓದುವುದು ಸಾಕು ಎನ್ನಿಸುವಾಗಲೇ ಓದಿಸುವುದನ್ನು ನಿಲ್ಲಿಸಬೇಕು. ಅದರಿಂದ ಮಗುವಿಗೆ ಓದುವುದರಲ್ಲಿನ ಉತ್ಸಾಹ ಹಾಗೇ ಉಳಿಯುತ್ತದೆ. ಇಲ್ಲದಿದ್ದರೆ ಮುಂದೆ ಓದುವುದೆಂದರೆ ಅದಕ್ಕೆ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ.

Monday, September 2, 2013

ಶಿಕ್ಷಕರನ್ನು ಗೌರವಿಸೋಣ ಬನ್ನಿ--ನನ್ನ ಲೇಖನ ಈ ದಿನದ(2/9/13) ಪ್ರಜಾವಾಣಿಯಲ್ಲಿ-ಗಮನಿಸಿ











ಗುರು ಗೌರವಿಸೋಣ ಬನ್ನಿ

1957ರಲ್ಲಿ ರಷ್ಯವು ಅಂತರಿಕ್ಷ ನೌಕೆಯನ್ನು ಉಡಾಯಿಸಿದಾಗ, ಅಮೆರಿಕದ ನಾಗರಿಕರು ತಮ್ಮ ಶಿಕ್ಷಣ ಇಲಾಖೆಯನ್ನು ಚುರುಕುಗೊಳಿಸುವಲ್ಲಿ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು. ಇದರಿಂದ ಎಚ್ಚೆತ್ತ ಸರ್ಕಾರ, ವಿಜ್ಞಾನ ಶಿಕ್ಷಣಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿ ಪ್ರತಿ ಶಾಲಾ- ಕಾಲೇಜನ್ನೂ ವಿಜ್ಞಾನದ ಉಪಕರಣಗಳಿಂದ ಸಜ್ಜುಗೊಳಿಸಿತು. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿತು.
ಇದರ ಪರಿಣಾಮವಾಗಿ ಅಮೆರಿಕವು ರಷ್ಯವನ್ನು ಹಿಂದಿಕ್ಕಿ ಚಂದ್ರನ ಮೇಲೆ ಪಾದಾರ್ಪಣೆ ಮಾಡಲು ಸಾಧ್ಯವಾಯಿತು. ನಮ್ಮ ದೇಶಕ್ಕಿಂತ ಅಮೆರಿಕನ್ನರಲ್ಲಿ ಇರುವ ಪ್ರಜ್ಞಾವಂತಿಕೆ ಮತ್ತು ಶಿಕ್ಷಣಕ್ಕೆ ಅವರು ನೀಡುವ ಆದ್ಯತೆಯನ್ನು ಈ ಉದಾಹರಣೆ ತಿಳಿಸುತ್ತದೆ. ಶಿಕ್ಷಣವು ವ್ಯಕ್ತಿ ಮತ್ತು ಶಕ್ತಿಯ ಪ್ರತೀಕ.
ದೇಶದ ಸಮಸ್ಯೆಗಳಿಗೆ ಈ ಕ್ಷೇತ್ರದಿಂದ ಮಾತ್ರ ಪರಿಹಾರ ಸಾಧ್ಯ. ಹೀಗಾಗಿ, ದೇಶ ಕಂಡ ಮೇಧಾವಿ, ಶಿಕ್ಷಕರ ಶಿಕ್ಷಕ ಡಾ. ಎಸ್.ರಾಧಾಕೃಷ್ಣನ್ ಅವರ 125ನೇ ಜನ್ಮದಿನದ ಈ ಸಂದರ್ಭದಲ್ಲಿ, ಉತ್ತಮ ಭವಿಷ್ಯದ ನಿರ್ಮಾತೃಗಳಾದ ಶಿಕ್ಷಕರನ್ನು ಗೌರವಿಸಲು ಇದು ಸುಸಮಯ.
`ನಮ್ಮ ದೇಶದಲ್ಲಿ ಒಬ್ಬ ಚಕ್ರವರ್ತಿ ಇದ್ದ. ಆತ ರಕ್ತಪಾತದಿಂದ ಕೂಡಿದ ಭಾರಿ ಯುದ್ಧದ ಮೂಲಕ ಸಾಮ್ರೋಜ್ಯವೊಂದನ್ನು ಗೆದ್ದ. ನಂತರ  ವಿರಕ್ತನಾಗಿ ಸಮರವನ್ನು ತ್ಯಜಿಸಿ ಸನ್ಯಾಸಿಯಾದ. ಅಹಿಂಸೆಯ ಮಹಾನ್ ಬೋಧಕನಾದ. ಅಂತೆಯೇ ಶಕ್ತಿ, ಸಾಹಸಗಳಿಂದ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಏರಿರುವ ನೀವು, ಮುಂದೆ ಏನಾಗುತ್ತೀರೋ ಯಾರು ಬಲ್ಲರು?'- 1949ರ ಅವಧಿಯಲ್ಲಿ ಪ್ರಪಂಚದ ಅತ್ಯಂತ ಶಕ್ತಿವಂತರು ಎನಿಸಿಕೊಂಡ ನಾಲ್ವರಲ್ಲಿ ಒಬ್ಬರಾದ, ತನ್ನ ಮಾತೇ ಅಂತಿಮ, ತಾನು ಮಾಡಿದ್ದೇ ಸರಿ ಎನ್ನುತ್ತಾ ಅಧಿಕಾರ ನಡೆಸಿದ ರಷ್ಯದ ಸರ್ವಾಧಿಕಾರಿ ಮಾರ್ಷಲ್ ಸ್ಟಾಲಿನ್ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದ ಧೈರ್ಯಶಾಲಿ ಮತ್ತಾರೂ ಅಲ್ಲ, ಡಾ. ಸರ್ವಪಲ್ಲಿ ರಾಧಾಕೃಷ್ಣನ್.
ವಿಶ್ವವಿಖ್ಯಾತಿ, ಸ್ಥಾನಮಾನ, ಅಧಿಕಾರ, ಗೌರವ, ಮರ್ಯಾದೆ ಏನೆಲ್ಲಾ ಇದ್ದರೂ ಒಂದು ದಿನವೂ ಅಹಮಿಕೆಯ ದಾಸರಾಗದೆ, ದಾಸವರೇಣ್ಯರಂತೆ ಸರಳ, ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದವರು ಅವರು. `ಈಗ ಏನಾಗಿದ್ದರೂ, ಮೊದಲು ನಾನು ಶಿಕ್ಷಕ' ಎನ್ನುತ್ತಾ, ವೃತ್ತಿಯೆಡೆಗೆ ತಮಗಿದ್ದ ಅದಮ್ಯ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದರು. `ಜನ್ಮದಿನ ನನ್ನದೇಕೆ? ಆಚರಿಸುವುದಾದರೆ ಅದು ಶಿಕ್ಷಕರ ದಿನ ಆಗಬಾರದೇಕೆ?' ಎಂದು ಹೇಳಿ, ಶಿಕ್ಷಕರನ್ನು ಸ್ಮರಿಸಲು ನಮಗೆಲ್ಲ ಒಂದು ವೇದಿಕೆಯನ್ನು ಅವರು ನಿರ್ಮಿಸಿಕೊಟ್ಟರು.
ಕನ್ನಡದ ಮೇರು ಸಾಹಿತಿ ವಿ.ಸೀ. ಅವರು ರಾಧಾಕೃಷ್ಣನ್ ಕುರಿತು `ವಿದ್ಯಾರ್ಥಿಗಳಿಗೆ ಅವರ ತರಗತಿಗಳೆಂದರೆ ಹಬ್ಬ. ವಿದ್ಯಾರ್ಥಿಗಳನ್ನು  ಬೈದು-ಗದರಿಸಿ, ದರ್ಪ ತೋರುವ ಮನೋಭಾವ ಅವರದಲ್ಲ. ಅವರು ಹೇಳಿದ್ದನ್ನು ಕೇಳಿ, ಬರೆಸಿದ್ದನ್ನು ಬರೆದವರು ಎಷ್ಟು ಉನ್ನತ ತರಗತಿಯಾದರೂ ಸರಿ ತೇರ್ಗಡೆ ಹೊಂದಬಹುದಾಗಿತ್ತು. ಅವರು ಬೋಧಿಸುವ ವಿಷಯ ಮನದಟ್ಟಾಗುತ್ತಿತ್ತು. ಅವರ ವಾಗ್ಮಯತೆ, ವಿಲಾಸ, ಸ್ಫ್ಪುಟತೆ ಸ್ಮರಣೀಯ. ಅವರದು ನಿಸ್ಸಂಶಯವಾದ ತೀರ್ಮಾನ.
ವಿದ್ಯಾಬೋಧನೆಯ ಚಾತುರ‌ಯವಲ್ಲದೆ ಮಾನವತೆ- ಔದಾರ‌ಯ- ವಾತ್ಸಲ್ಯವೂ ಅವರ ಜೊತೆಗಿದ್ದವು' ಎಂದು ಹೇಳಿರುವ ಮಾತುಗಳು ನಮ್ಮ ಶಿಕ್ಷಕರಿಗೆ ಸ್ಫೂರ್ತಿದಾಯಕವಾಗಿವೆ. ದೆ ಗುರು-ಶಿಷ್ಯರ ನಡುವೆ ಅಪಾರವಾದ ವ್ಯತ್ಯಾಸ ಇತ್ತು. ಏಕೆಂದರೆ ಜ್ಞಾನವನ್ನು ಅನುಭವದಿಂದಲೇ ಪಡೆಯಬೇಕಾಗಿತ್ತು. ಜೊತೆಗೆ ಜ್ಞಾನವು ಒಂದೇ ತೆರನಾಗಿತ್ತು.
ಸಾವಿರಾರು ವರ್ಷಗಳವರೆಗೆ ಅದರಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಆದರೆ ಇಂದಿನ ನೂರು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇಂದು ಶಿಕ್ಷಕ- ವಿದ್ಯಾರ್ಥಿ ನಡುವಿನ ಅಂತರ ಕೇವಲ ತರಗತಿಯ ಅವಧಿಯಾದ 45 ನಿಮಿಷಕ್ಕೆ ಬಂದು ನಿಂತಿದೆ. ಈ ನಿಟ್ಟಿನಲ್ಲಿ, ತಾನು ಬೋಧಿಸುವ ವಿಷಯವನ್ನು, ವಿದ್ಯಾರ್ಥಿಗಳನ್ನು ಹಾಗೂ ವೃತ್ತಿಯನ್ನು ಪ್ರೀತಿಸುವುದು ಶಿಕ್ಷಕರಿಗೆ ಇರಬೇಕಾದ ಅರ್ಹತೆ ಎಂಬ ರಾಧಾಕೃಷ್ಣನ್ ಅವರ ಮಾತುಗಳು ಅರ್ಥಗರ್ಭಿತವಾಗಿವೆ.
ಕನ್‌ಪ್ಯೂಷಿಯಸ್ ಹೇಳುವಂತೆ, ದೇಶದ ನರ ನಾಡಿಗಳನ್ನು ಶಾಲಾ ಕೊಠಡಿಯಲ್ಲಿ ಸಿದ್ಧಗೊಳಿಸುವಾಗ ಶಿಕ್ಷಕ ಮಾದರಿಯಾಗಿ ಇರಲೇಬೇಕು. ಶಿಕ್ಷಕರು ಪ್ರತಿ ಕ್ಷೇತ್ರಕ್ಕೂ ಕೊಡುಗೆ ನೀಡದಿದ್ದರೂ ಎಲ್ಲ ಕ್ಷೇತ್ರಗಳ ಉತ್ತಮರನ್ನು ಹುಟ್ಟು ಹಾಕುವ ಶಕ್ತಿ ಅವರಲ್ಲಿ ಇರುವುದರಿಂದ ಸಮಾಜ ಅವರನ್ನು ಗೌರವಿಸಲೇಬೇಕು.
ಶಿಕ್ಷಕ ತನಗೆ ಗೌರವ ಸಿಗಬೇಕೆಂದು ಬಯಸುವುದಾದರೆ ಆ ಗೌರವಕ್ಕೆ ಆತ ಅರ್ಹನಾಗಿರಬೇಕು ಎಂದು ಅರವಿಂದ ಘೋಷ್ ಹೇಳಿದ್ದಾರೆ.   ಇದನ್ನು ಕೆಲವೊಮ್ಮೆ ವಾಸ್ತವ ಬದುಕಿನಲ್ಲೂ ಕಾಣುತ್ತೇವೆ. ಬಿಜಾಪುರದ ಇಂಡಿ ಮಾರ್ಗದಲ್ಲಿ ಬರುವ ಅಥರ್ಗಾ ಗ್ರಾಮದಲ್ಲಿ ಶ್ರೀ ರೇವಣಸಿದ್ಧಪ್ಪ ಮಾಸ್ತರರಿಗೆ ದೇವಾಲಯವನ್ನು ನಿರ್ಮಿಸಿ ಪ್ರತಿ ದಿನ ಪೂಜೆ ಸಲ್ಲಿಸಲಾಗುತ್ತದೆ. ಪಲ್ಲಕ್ಕಿ ಉತ್ಸವ, ಜಾತ್ರೆ, ಮಾದರಿ ಗ್ರಂಥಾಲಯವನ್ನು ನಡೆಸುತ್ತಿರುವುದು, ಜೊತೆಗೆ ಬಳ್ಳಾರಿಯ ಶ್ರೀ ಎಚ್.ಎಂ.ಕೊಟ್ರಬಸಯ್ಯ ಎಂಬ ಶಿಕ್ಷಕರ ಹೆಸರಿನಲ್ಲಿ ರಂಗವೇದಿಕೆಯನ್ನು ನಿರ್ಮಿಸಿರುವಂತಹ ಅನೇಕ ಉದಾಹರಣೆಗಳು ಶಿಕ್ಷಕರಿಗೆ ನಮ್ಮ ಸಮಾಜ ನೀಡುವ ಗೌರವವನ್ನು ಸೂಚಿಸುತ್ತವೆ.
ಶ್ರೇಷ್ಠ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕೆ ಪೂರಕವಾಗಿ ಇಂದು ಮಾನವ ಸಂಪನ್ಮೂಲದ ವಿಪುಲ ವಿಕಾಸಕ್ಕೆ ಎಲ್ಲೆಡೆ ಚಿಂತನೆ, ಯೋಜನೆ ನಡೆಯುತ್ತಿರುವುದನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ನಿರ್ಜೀವ ಕಡತಗಳೊಂದಿಗೆ ವ್ಯವಹರಿಸಿ, ಬಹುಬೇಗ ವಿಲೇವಾರಿ ಮಾಡಿ ಭೇಷ್ ಎನ್ನಿಸಿಕೊಳ್ಳುವುದು ಸುಲಭ. ಆದರೆ ಜೀವಂತ ಮಕ್ಕಳ ಬದುಕನ್ನು ಕಟ್ಟುವ, ಆ ಮೂಲಕ ನೆಮ್ಮದಿಯ ನಾಳೆಗಳನ್ನು ಹೊಂದಲು ಬೇಕಾದುದನ್ನು ಸೃಷ್ಟಿಸುವ ದೊಡ್ಡ ಆಶಯ ಶಿಕ್ಷಕರನ್ನು ಅವಲಂಬಿಸಿದೆ.
ಶಿಕ್ಷಕರು ಇಂದಿನ ವಿದ್ಯಮಾನಗಳಿಗೆ ತಕ್ಕಂತೆ ನವೀಕರಣಗೊಂಡು, ಸಮರ್ಪಕವಾದ ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಂಡರೆ ಸಹಜವಾಗಿಯೇ ಸಮಾಜದಲ್ಲಿ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ಜ್ಞಾನ, ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರಿದಿದ್ದರೂ ಸಾಮಾಜಿಕ- ನೈತಿಕ ಮೌಲ್ಯಗಳ ಸಾಧನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಇದಕ್ಕೆ ಮಾಧ್ಯಮಗಳಲ್ಲಿ ಬರುತ್ತಿರುವ ವಿವಿಧ ಘಟನೆಗಳೇ ಸಾಕ್ಷಿ.
ಶಿಕ್ಷಕ ವೃತ್ತಿಯ ಘನತೆಯನ್ನು ಅರಿಯುವಲ್ಲಿ ಇಂದಿನ ಸಮಾಜ ವಿಫಲವಾಗಿರುವುದು ಈ ಕ್ಷೇತ್ರದ ಅಪಮೌಲ್ಯಕ್ಕೆ ಕಾರಣವಾಗಿದೆ. ನಾವು ಅಕ್ಷರಸ್ಥರಾದರಷ್ಟೇ ಸಾಲದು, ವಿದ್ಯಾವಂತರಾಗಬೇಕಿದೆ. ಅದಕ್ಕಾಗಿ, ಶಾಲೆಗೆ ಬರುವ ಮಕ್ಕಳನ್ನು ಅರಳುವ ಮೊಗ್ಗುಗಳಾಗಿ ಬದಲಾಯಿಸಬೇಕಾದ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ.
ಒಬ್ಬ ತಂದೆ 100 ಶಿಕ್ಷಕರಿಗೆ ಸಮಾನ. ಒಬ್ಬ ತಾಯಿ 1000 ಶಿಕ್ಷಕರಿಗೆ ಸಮಾನ. ಹಾಗಾಗಿ ಒಬ್ಬ ಶಿಕ್ಷಕ ತಂದೆ, ತಾಯಿ ಮತ್ತು ಗುರುವಾಗಿ, ಅಂದರೆ 1101 (100+1000+1) ಶಿಕ್ಷಕರಿಗೆ ಸಮನಾಗಿ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಈ ಉದ್ಯೋಗಕ್ಕೆ ಸೇರುವಾಗ ಮನೋಭಿಲಾಷೆ ಒಂದಿದ್ದರೆ ಸಾಲದು, ಪ್ರೀತಿಯೂ ಇರಬೇಕು. ಮುಖ್ಯವಾಗಿ ತಾನೊಬ್ಬ ಜೀವಂತ ಶಿಲ್ಪವನ್ನು ನಿರ್ಮಿಸುತ್ತಿರುವ ಅಪರೂಪದ ರೂವಾರಿ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇ ರಾಧಾಕೃಷ್ಣನ್ ಅವರಿಗೆ ಶಿಕ್ಷಕ ವೃಂದ ನೀಡಬಹುದಾದ ಬಹು ದೊಡ್ಡ ಉಡುಗೊರೆ.
ಅರಿಯಲಾರದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದಷ್ಟೇ ಶಿಕ್ಷಣವಲ್ಲ. ತಮ್ಮ ತಪ್ಪು ವರ್ತನೆಗಳನ್ನು ತ್ಯಜಿಸಿ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಕಲಿಸಿಕೊಡುವುದು ನಿಜವಾದ ಶಿಕ್ಷಣ.
-ಮಹಾತ್ಮ ಗಾಂಧಿ.
ಅನಕ್ಷರಸ್ಥರ ನಾಡಿನಲ್ಲಿ ಪ್ರಜಾಪ್ರಭುತ್ವ ಕೇವಲ ಒಂದು ಅಣಕವಾಗಿ ಅವಹೇಳನಕ್ಕೆ ಒಳಪಡುತ್ತದೆ.
-ಬರ್ಟಂಡ್ ರಸೆಲ್.


Sunday, August 4, 2013

ಪ್ರಜಾವಾಣಿ ಪತ್ರಿಕೆಲ್ಲಿ (5/8/13)ರಾಜ್ಯ ಗಣಿತ & ವಿಜ್ಞಾನ ಒಲಂಪಿಯಾಡ್ ಕುರಿತ ಲೇಖನ



ರಾಜ್ಯ ಒಲಂಪಿಯಾಡ್ ಸಿದ್ಧರಾಗೋಣ

ಮಕ್ಕಳಿಗೆ ಗಣಿತ- ವಿಜ್ಞಾನ ವಿಷಯಗಳು ಹೆಚ್ಚು ಪ್ರಿಯವಾಗಬೇಕು ಎಂಬ ಅಭಿಲಾಷೆ ನಿನ್ನೆ ಮೊನ್ನೆಯದಲ್ಲ. ಅದಕ್ಕಾಗಿ ಸರ್ಕಾರ, ಶಿಕ್ಷಣ ಇಲಾಖೆ, ಸಂಘ- ಸಂಸ್ಥೆಗಳು, ತಜ್ಞರು ಹಾಗೂ ಶಿಕ್ಷಕರು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಲೇ ಇರುತ್ತಾರೆ. ಕ್ಲಿಷ್ಟ ಅಂಶಗಳನ್ನು ಸರಳವಾಗಿ ಮನನ ಮಾಡಿಸಲು ಮತ್ತು ಪ್ರಾತ್ಯಕ್ಷಿಕೆ ಒದಗಿಸಲು ವಿಜ್ಞಾನ- ಗಣಿತ ಪ್ರಯೋಗಾಲಯಗಳು, ಮೇಳಗಳು, ಮಾದರಿ ವಸ್ತು ಪ್ರದರ್ಶನಗಳು, ಗೋಷ್ಠಿಗಳು, ಎಜುಸ್ಯಾಟ್ ಪಾಠ... ಹೀಗೆ ಹತ್ತಾರು ವಿನೂತನ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಲೇ ಇವೆ.
ಈ ಪ್ರಯತ್ನಗಳ ನಡುವೆಯೂ ಅನೇಕ ಮಕ್ಕಳಿಗೆ ಇಂದಿಗೂ ಗಣಿತ- ವಿಜ್ಞಾನ ಕಬ್ಬಿಣದ ಕಡಲೆ. ಈ ವಿಷಯಗಳನ್ನು ಇತರ ಸಾಮಾನ್ಯ ವಿಷಯಗಳಂತೆ ಅವರು ಪರಿಗಣಿಸುತ್ತಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ, ದಿನನಿತ್ಯ ತಮ್ಮ ಪರಿಸರದಲ್ಲಿ, ಶಾಲೆಯಲ್ಲಿ, ಮನೆಯಲ್ಲಿ ಎಲ್ಲೆಡೆ ನಡೆಯುವ ಚಟುವಟಿಕೆಗಳ ಹಿಂದಿರುವ ಗಣಿತ- ವಿಜ್ಞಾನದ ರಹಸ್ಯಗಳು ಮಕ್ಕಳಿಗೆ ಸರಿಯಾಗಿ ಮನನವಾಗುತ್ತಿಲ್ಲ. ಇದರಿಂದಾಗಿ ಈ ವಿಷಯಗಳು ಮಕ್ಕಳಿಗೆ, ಅದರಲ್ಲೂ ಪ್ರಾಥಮಿಕ- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯಗಳಾಗುತ್ತಿಲ್ಲ. ಈ ಬೆಳವಣಿಗೆಯಿಂದ ದೇಶದಲ್ಲಿ ಗಣಿತ- ವಿಜ್ಞಾನ ಪದವೀಧರರು ಹಾಗೂ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ರಾಜ್ಯ ಶಿಕ್ಷಣ ಇಲಾಖೆ ಇಂತಹ ಅನೇಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಅದಕ್ಕಾಗಿ ಈ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಒಲಂಪಿಯಾಡ್ ಪರೀಕ್ಷೆ ಆಯೋಜಿಸುತ್ತಿದೆ.
ಏನಿದು ಒಲಂಪಿಯಾಡ್?
ನಮ್ಮ ಮಕ್ಕಳಲ್ಲಿ ಅನೇಕ ಬಗೆಯ ಪ್ರತಿಭೆ ಇರುತ್ತದೆ. ಸರಿಯಾದ ಪ್ರೋತ್ಸಾಹ ಸಿಗದೆ ಅಂತಹ ಬಹುತೇಕ ಪ್ರತಿಭೆಗಳು ಕಮರಿ ಹೋಗುತ್ತವೆ. ಅದರಲ್ಲೂ ವಿಜ್ಞಾನ- ಗಣಿತ ವಿಷಯಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಹಾಗಾಗಿ ಈ ವಿಷಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡುವುದು ಈ ಒಲಂಪಿಯಾಡ್‌ನ ಪ್ರಮುಖ ಉದ್ದೇಶ. ಅದಕ್ಕಾಗಿ ಈ ವರ್ಷ 6 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕನ್ನಡ- ಇಂಗ್ಲಿಷ್ ಎರಡೂ ಮಾಧ್ಯಮಗಳ ಮಕ್ಕಳು ಭಾಗವಹಿಸಬಹುದು. ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರಲಿದೆ.
ಸ್ಪರ್ಧೆಯ ಹಂತ
ಶಾಲೆ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ನಾಲ್ಕು ಬಗೆಗಳಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.
ಶಾಲಾ ಹಂತದಲ್ಲಿ ಆಯಾ ಶಾಲೆಯ 6 ಮತ್ತು 9ನೇ ತರಗತಿಯ ಎಲ್ಲ ಮಕ್ಕಳೂ ಪರೀಕ್ಷೆಯಲ್ಲಿ ಭಾಗವಹಿಸಬಹುದು. ರಾಜ್ಯದಾದ್ಯಂತ ಆಗಸ್ಟ್ 31ರಂದು ಏಕಕಾಲಕ್ಕೆ ಶಾಲಾ ಹಂತದ ಪರೀಕ್ಷೆ ನಡೆಯಲಿದೆ. ಉತ್ತರ ಪತ್ರಿಕೆಗಳನ್ನು ಶಾಲಾ ಹಂತದಲ್ಲೇ ಮೌಲ್ಯಮಾಪನ ಮಾಡಿ ಸೆಪ್ಟೆಂಬರ್ 4ರೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶೇ 5ರಷ್ಟು ಮಕ್ಕಳು ತಾಲ್ಲೂಕು ಹಂತಕ್ಕೆ ಅರ್ಹರಾಗುತ್ತಾರೆ. ಶಾಲಾ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಶಾಲೆಯವರೇ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರಮಾಣಪತ್ರ ವಿತರಣೆ ಮಾಡುತ್ತಾರೆ. ತಾಲ್ಲೂಕು ಹಂತದಲ್ಲಿ ಎಲ್ಲ ಶಾಲೆಗಳಿಂದ ಹೆಚ್ಚು ಅಂಕ ಗಳಿಸಿ ಆಯ್ಕೆಯಾದ ಮಕ್ಕಳಿಗೆ ಸೆಪ್ಟೆಂಬರ್ 21ರಂದು ರಾಜ್ಯದೆಲ್ಲೆಡೆ ಒಂದೇ ಸಮಯಕ್ಕೆ ಪರೀಕ್ಷೆ ನಡೆಯಲಿದೆ. ಈ ಫಲಿತಾಂಶವನ್ನು ಸೆ. 25ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ (http://www.schooleducation.kar.nic.in) ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಉನ್ನತ ಸ್ಥಾನ ಪಡೆದ ಶೇ 5ರಷ್ಟು ಮಕ್ಕಳು ಜಿಲ್ಲಾ ಹಂತಕ್ಕೆ ಪ್ರವೇಶ ಪಡೆಯುತ್ತಾರೆ. ಬ್ಲಾಕ್ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಆಯಾ ಶಾಲೆಗಳಲ್ಲಿ ಗಾಂಧಿ ಜಯಂತಿಯಂದು ಶಿಕ್ಷಣ ಇಲಾಖೆ ವತಿಯಿಂದ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಪ್ರತಿ ತಾಲ್ಲೂಕಿನಿಂದ ಆಯ್ಕೆಯಾದ ಮಕ್ಕಳಿಗೆ ನವೆಂಬರ್ 8ರಂದು ಎಲ್ಲ ಜಿಲ್ಲೆಗಳಲ್ಲಿ ಒಂದೇ ಬಾರಿಗೆ ಜಿಲ್ಲಾ ಹಂತದ ಪರೀಕ್ಷೆ ನಡೆಯುತ್ತದೆ. ಇದರ ಫಲಿತಾಂಶ ನವೆಂಬರ್ 13ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಅತಿ ಹೆಚ್ಚು ಅಂಕ ಪಡೆದ ಶೇ 10ರಷ್ಟು ಮಕ್ಕಳು ಅಂತಿಮ ಹಂತವಾದ ರಾಜ್ಯ ಹಂತಕ್ಕೆ ಅರ್ಹರಾಗುತ್ತಾರೆ. ಜಿಲ್ಲಾ ಹಂತದಲ್ಲಿ ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ (ಜನವರಿ 26) ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಲಾಕ್ ಹಂತದ ಕಲಿಕೋತ್ಸವ ದಿನದಂದು ಪ್ರಮಾಣಪತ್ರ ವಿತರಿಸಲಾಗುತ್ತದೆ.
ರಾಜ್ಯ ಹಂತದ ಪರೀಕ್ಷೆಗೆ ಆಯ್ಕೆಯಾದ ಮಕ್ಕಳಿಗೆ ವಿಭಾಗೀಯ ಮಟ್ಟದಲ್ಲಿ ಡಿಸೆಂಬರ್ 13ರಂದು ಪರೀಕ್ಷೆ ನಡೆದು, 20ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯ ಗಣಿತ- ವಿಜ್ಞಾನದ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನದ ಜೊತೆಗೆ ಆ ಶಾಲೆಗೆ ರೋಲಿಂಗ್ ಶೀಲ್ಡ್‌ನ್ನು ಮುಂಬರುವ ಗಣರಾಜ್ಯೋತ್ಸವದಂದು ವಿತರಿಸಲಾಗುತ್ತದೆ.
ಪಠ್ಯವಸ್ತು ಮತ್ತು ಪ್ರಶ್ನೆಪತ್ರಿಕೆ
ರಾಜ್ಯ ಹಂತದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ರಚಿಸಲಾಗುವ ಸಮಿತಿಯು ಒಲಂಪಿಯಾಡ್ ಪರೀಕ್ಷೆಗೆ ಪಠ್ಯ ವಸ್ತುವನ್ನು ನಿಗದಿಪಡಿಸಲಿದೆ. ಸಾಮಾನ್ಯವಾಗಿ 6ನೇ ತರಗತಿಗೆ 1ರಿಂದ 5ನೇ ತರಗತಿ ಪಠ್ಯವಸ್ತು, 9ನೇ ತರಗತಿಗೆ 8ನೇ ತರಗತಿವರೆಗಿನ ಪಠ್ಯವಸ್ತುವನ್ನು ಪರಿಗಣಿಸಬಹುದು. ಶಾಲಾ ಹಂತದ ಪರೀಕ್ಷೆಗೆ ಆಯಾ ಶಾಲಾ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸಮಿತಿಯು ಜುಲೈ 31ರೊಳಗೆ ಪಠ್ಯವಸ್ತು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ರಾಜ್ಯ ಹಂತದ ಸಮಿತಿಯು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ, ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಪರೀಕ್ಷೆ ನಡೆಸುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ 50 ಪ್ರಶ್ನೆಗಳು ಇರುತ್ತವೆ. 50 ಅಂಕಗಳ ವಸ್ತುನಿಷ್ಠ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗುತ್ತದೆ. ಅದರಲ್ಲಿ `ಪೂರ್ಣಗೊಳಿಸಿ' `ಉತ್ತರ ಆಯ್ಕೆ ಮಾಡಿ' `ಹೊಂದಿಸಿ ಬರೆಯಿರಿ' `ಹೋಲಿಕೆ ಮಾಡಿ' `ಗುಂಪಿಗೆ ಸೇರದ ಪದ' ಇತ್ಯಾದಿ ವಿಧಗಳು ಇರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕ ಇದ್ದು, ಪ್ರತಿ ವಿಷಯದ ಪರೀಕ್ಷೆಗೆ ಒಂದು ಗಂಟೆ ಸಮಯ ನಿಗದಿಪಡಿಸಲಾಗಿದೆ. ಬ್ಲಾಕ್ ಹಂತದಿಂದ ಉತ್ತರ ಪತ್ರಿಕೆಗೆ ಒ.ಎಂ.ಆರ್. ಶೀಟ್ ಬಳಸಲಾಗುತ್ತಿದ್ದು, ಅದರ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ.
ಮಕ್ಕಳೇ, ಈ ಸುಂದರ ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತೀರಿ ತಾನೇ? ಹಾಗಾದರೆ ತಡವೇಕೆ? ಒಲಂಪಿಯಾಡ್‌ಗೆ ಸಿದ್ಧರಾಗೋಣ ಬನ್ನಿ.
ಹೆಚ್ಚಿನ ಮಾಹಿತಿಗೆ ಹತ್ತಿರದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಥವಾ  http://ssakarnataka.gov.in/ ಅಥವಾhttp://www.schooleducation.kar.nic.in/
ಇತರ ಒಲಂಪಿಯಾಡ್
1959ರಲ್ಲಿ ರೊಮೇನಿಯಾದಲ್ಲಿ ಆರಂಭವಾಗಿರುವ, ಪ್ರತಿ ವರ್ಷ ಜುಲೈನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಏರ್ಪಡಿಸಲಾಗುತ್ತಿರುವ ಅಂತರ ರಾಷ್ಟ್ರೀಯ ಗಣಿತ ಒಲಂಪಿಯಾಡ್‌ನಲ್ಲಿ ನೂರಕ್ಕೂ ಹೆಚ್ಚು ದೇಶಗಳ ಗಣಿತ ಉತ್ಸಾಹಿಗಳು ಪಾಲ್ಗೊಳ್ಳುತ್ತಿದ್ದಾರೆ.  ಭಾರತದ ರಾಷ್ಟ್ರೀಯ ಗಣಿತ ಒಲಂಪಿಯಾಡ್ ಸ್ಪರ್ಧೆಗಳು 1986ರಿಂದ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಏರ್ಪಾಡಾಗುತ್ತಿವೆ.  ವಿವರಗಳಿಗೆ www.imo-official.org ಅಥವಾhttp://en.wikipedia.org/wiki/indian_national_mathematical_olympiad ಸಂಪರ್ಕಿಸಬಹುದು. ರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್‌ನ್ನು 3ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ನಡೆಸಲಾಗುತ್ತದೆ. ಪ್ರಥಮ ಹಂತದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕನಿಷ್ಠ 50 ಮಕ್ಕಳು ನೋಂದಾಯಿಸಿಕೊಳ್ಳಬೇಕು. ನೋಂದಣಿಗಳನ್ನು ಶಾಲೆಗಳ ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಕಳುಹಿಸಬೇಕಾಗುತ್ತದೆ. ಇದಕ್ಕೆ ಪೂರಕವಾದ ಮಾಹಿತಿ ಕೈಪಿಡಿ ಅಂತರ್ಜಾಲದಲ್ಲಿ ದೊರೆಯುತ್ತದೆ. ಗಮನಿಸಿ http://www.sofworld.org/html2003/htp.shtml.
ಪರೀಕ್ಷೆ ವೇಳಾಪಟ್ಟಿ
ವಿಜ್ಞಾನ (ಸಮಯ) ಬೆಳಿಗ್ಗೆ 10ರಿಂದ 11
ಗಣಿತ (ಸಮಯ) ಮಧ್ಯಾಹ್ನ 12ರಿಂದ 1
ಶಾಲಾ ಹಂತ
   31.8.2013
ತಾಲ್ಲೂಕು ಹಂತ
   21.9.2013
ಜಿಲ್ಲಾ ಹಂತ
   08.11.2013
ರಾಜ್ಯ ಹಂತ
   13.12.2013