Sunday, January 30, 2011

water therapy article in vijayakarnataka on 29/1/2011

exam preparation article in prajavani on 31/1/2011



ಪರೀಕ್ಷಾ ಬದ್ಧತೆ... ಅಂತರಜಾಲ ಸಿದ್ಧತೆ

ಪರಮೇಶ್ವರಯ್ಯ ಸೊಪ್ಪಿಮಠ
ಈ ವಿಭಾಗದಿಂದ ಇನ್ನಷ್ಟು ‘ಪರೀಕ್ಷೆ ಎಂದರೆ ಹೂವಿನ ಚೆಂಡೆ? ಚಿಂತಿಸಬಾರದು ದುರ್ಗತಿಗೆ...’ ಎಂದು ನರಸಿಂಹಸ್ವಾಮಿಯವರು ‘ಹಿಂದಿನ ಸಾಲಿನ ಹುಡುಗರು’ ಕವನದಲ್ಲಿ ಬರೆದ ಸಾಲುಗಳು ಪರೀಕ್ಷೆಗೆ ಅತಿ ಕಳವಳ ಬೇಡ ಎಂಬುದನ್ನು ಒತ್ತಿ ಹೇಳಿದೆ. ಆದರೆ ನಮ್ಮ ಮಕ್ಕಳು ಅದನ್ನು ದೊಡ್ಡ ಯುದ್ಧದಂತೆ ಪರಿಗಣಿಸಿ ಗೆದ್ದರೆ ಉಳಿವು, ಸೋತರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗೆಗಿನ ವರದಿಗಳನ್ನು ಗಮನಿಸುತ್ತಿದ್ದೇವೆ.
ಪರೀಕ್ಷೆಗಳೆಂದರೆ ಏನೋ ಭಯ! ತೀರಾ ಗಾಬರಿಯಾಗಿ, ಬೆವೆತು, ಕೈಕಾಲು ನಡುಗಿ, ಪರೀಕ್ಷೆ ಬರೆಯದೇ ಹೊರಬರುತ್ತಾರೆ. ಇನ್ನು ಕೆಲವರು ಸರಿಯಾಗಿ ಬರೆದಿಲ್ಲ, ಫೇಲಾಗಬಹುದು ಎಂದು ಅನಾಹುತ ಮಾಡಿಕೊಳ್ಳುತ್ತಾರೆ.
ಮನೋವಿಜ್ಞಾನಿಗಳ ಪ್ರಕಾರ ಪರೀಕ್ಷಾ ಭಯವು ಮಾನಸಿಕ ಪ್ರಕ್ರಿಯೆ. ಕೆಲವು ಸಂದರ್ಭದಲ್ಲಿ ಇದು ಸ್ವಾಭಾವಿಕ. ಮನಸ್ಸು ಮಾಡಿದಲ್ಲಿ ಈ ಭಯದಿಂದ ಮುಕ್ತರಾಗಬಹುದು. ಪರೀಕ್ಷೆ ಎಂಬುದು ಗಗನ ಕುಸುಮವೇನಲ್ಲ. ಅದು ನಮ್ಮ ಕೈಗೆಟುಕಲಾರದಂತಹುದೇನಲ್ಲ. ಅದೊಂದು ರೀತಿ ಮಕ್ಕಳಿಗೆಲ್ಲಾ ಹಗ್ಗದ ಹಾವು. ಹಾಗಾಗಿ ವಿದ್ಯಾರ್ಥಿಗಳು ಅದಕ್ಕೆ ಹೆದುರುವ ಅಗತ್ಯವೇ ಇಲ್ಲ.
ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಪರೀಕ್ಷಾ ಜ್ಜರ ಎಲ್ಲೆಲ್ಲೂ ಹರಡುತ್ತದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿವರೆಗಿನ ವಿದ್ಯಾರ್ಥಿಗಳು ಹಗಲಿರುಳು ಆ ಸಮಯದಲ್ಲಿ ಓದುತ್ತಾರೆ. ಓದು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಅಡಿಪಾಯ. ಅದರಿಂದಾಗಿ ವಿದ್ಯಾರ್ಥಿಗಳ ಪರೀಕ್ಷಾ ದಿನಗಳು ಮಹತ್ವ ಪಡೆಯುತ್ತವೆ.
ಕೆಲವರು ಪರೀಕ್ಷೆ ಹತ್ತಿರವಾದಂತೆ ಯಾವ ಆಟ, ಊಟ, ಸಿನಿಮಾ, ಹಬ್ಬಗಳ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಆ ಸಮಯದಲ್ಲಿ ಲೋಕದ ಸಂಪರ್ಕವನ್ನೆಲ್ಲಾ ಕಡಿದುಕೊಂಡು, ಒಂದು ಕೊಠಡಿಗೆ ಸೀಮಿತವಾಗಿ ತಮ್ಮನ್ನು ತಾವೇ ಬಂಧಿಸಿಟ್ಟುಕೊಳ್ಳುತ್ತಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಅದರ ಬದಲಾಗಿ ಓದಿನ ನಡುವೆ ಆಗಾಗ ವಿಶ್ರಾಂತಿ ಪಡೆಯಬೇಕು. ಹಾಯಾಗಿ ಓಡಾಡಬೇಕು. ಆಟ, ಊಟ, ಮನೋರಂಜನೆಗಳಿಗೂ ಸ್ವಲ್ಪ ಸಮಯ ಮೀಸಲಿಡುವುದು ಉತ್ತಮ. ಈ ರೀತಿಯ ವರ್ತನೆಯಿಂದ ಭಯವು ದೂರ ಸರಿದು ನಿಲ್ಲುತ್ತದೆ.
ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ತಪ್ಪು ಹೆಜ್ಜೆಗಳನ್ನಿಡುತ್ತಾರೆ. ಕೊನೆ ಕೊನೆಗೆ ಪ್ರಾಯಶ್ಚಿತ್ತ ಪಡುತ್ತಾರೆ. ಪರೀಕ್ಷೆಗೆ ಶಿಸ್ತುಬದ್ಧವಾಗಿ ಪೂರ್ವ ತಯಾರಿಮಾಡಿಕೊಳ್ಳದೆ ನಾಳೆ ಓದಿದರಾಯಿತು, ಅದೇನು ದೊಡ್ಡದು. ಎಂದು ಅಸಡ್ಡೆ ಮಾಡಿ ಬೇಜವಾಬ್ದಾರಿಯಿಂದ ಕಾಲ ನೂಕುವ ಮಕ್ಕಳು ನಂತರ ಪಡುವ ಪಡಿಪಾಟಲು ಹೇಳತೀರದು. ಹೆಚ್ಚು ಅಧ್ಯಯನ ಮಾಡಿದಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಮೊದಲು ವಿದ್ಯಾರ್ಥಿಗಳು ತಮ್ಮ ಮೇಲೆ ವಿಶ್ವಾಸ ವಿಡುವುದನ್ನು ಕಲಿಯಬೇಕು. ಸಫಲತೆ ಹಾಗು ಆತ್ಮ ವಿಶ್ವಾಸಗಳು ಒಂದೇ ನಾಣ್ಯದ ಎರಡು ಮುಖಗಳು.
ಅಂತರಜಾಲದಲ್ಲಿ...

ಮಕ್ಕಳು ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಓದಿದ್ದರೆ ಖಂಡಿತವಾಗಿ ಹೆಚ್ಚು ಅಂಕ ಗಳಿಸಿ ಯಶಸ್ಸನ್ನು ಸಾಧಿಸುತ್ತಾರೆ. ಪರೀಕ್ಷೆಗೆ ಬರೀ ಓದಿದರಷ್ಟೆ ಸಾಲದು. ಬರೆಯುವ ವಿಶಿಷ್ಟ ತಂತ್ರಗಳನ್ನು ಕರಗತ ಮಾಡಿಕೊಳ್ಳಬೇಕು. ಅದಕ್ಕೆ ಮಕ್ಕಳು ಪರೀಕ್ಷೆಗೆ ಹೇಗೆ ಸಿದ್ಧಗೊಳ್ಳಬೇಕು? ಹೆಚ್ಚಿನ ಅಂಕಗಳನ್ನು ಗಳಿಸಲು ಅಳವಡಿಸಿಕೊಳ್ಳಬಹುದಾದ ತಂತ್ರಗಳು ಯಾವುವು? ಇತರೆ ವಿದ್ಯಾರ್ಥಿಗಳಿಗಿಂತ ಹೇಗೆ ಭಿನ್ನವಾಗಿ ಗುರುತಿಸಿಕೊಳ್ಳಬಹುದು? ಅತ್ಯುತ್ತಮ ವಿದ್ಯಾರ್ಥಿ ಎನಿಸಿಕೊಳ್ಳಬೇಕಾದರೆ ಯಾವ ರೀತಿ ನಿಯಮಗಳನ್ನು ಪಾಲಿಸಬೇಕು? ಈ ರೀತಿಯಾಗಿ ಪರೀಕ್ಷಾ ಸಿದ್ಧತೆಗಾಗಿ ನೆರವು ನೀಡಲು 5 ಕೋಟಿಗೂ ಹೆಚ್ಚು ವೆಬ್‌ಸೈಟ್‌ಗಳು ಕಾದು ನಿಂತಿವೆ ಎಂದರೆ ಸಹಜವಾಗಿ ಅಚ್ಚರಿ ಎನಿಸುತ್ತದೆ. ಆದರೂ ಸತ್ಯ. ಅದರಲ್ಲಿ ಮಾಹಿತಿಗಳ ಕಣಜವೇ ಅಡಗಿದೆ. ಛಾಯಾ ಚಿತ್ರಗಳೂ ಲಭ್ಯವಿವೆ. ವಿಡಿಯೋ ತುಣುಕುಗಳನ್ನೂ ನಾವು ಕಾಣಬಹುದಾಗಿದೆ.
ವಿದ್ಯಾರ್ಥಿಗಳ ಪಾಲಿಗೆ ಅಂತರಜಾಲ ಕಾಮಧೇನುವಾಗಿರುವುದರಿಂದ ಅವರು ಇದರ ಅಮೃತವನ್ನು ಸವಿಯಬೇಕು. ಮಾಹಿತಿಯ ಮಹಾಸಾಗರದಲ್ಲಿ ಶಾಲಾ ಪರೀಕ್ಷಾ ಸಿದ್ಧತೆಯ ತಾಣಗಳನ್ನು ಹುಡುಕಬೇಕಾದಲ್ಲಿ, www.google.com ಸರ್ಚ್ ಇಂಜಿನ್ನಿನಲ್ಲಿ school examination technique ಎಂದು ಟೈಪ್ ಮಾಡಿ ಹುಡುಕಲು ಹೇಳಿದ 20 ಸೆಕೆಂಡಿನಲ್ಲಿ ವಿವಿಧ ತಾಣಗಳ ಪಟ್ಟಿ ಪ್ರತ್ಯಕ್ಷವಾಗುತ್ತವೆ. ಅದರಲ್ಲಿ image ಎಂದು ಟೈಪ್ ಮಾಡಿದರೆ ಶಾಲಾ ಪರೀಕ್ಷೆಗಳ ನೂರಾರು ಚಿತ್ರಗಳು ಸಿಗುತ್ತವೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಪುಟಿದೆಬ್ಬಿಸಲು ಈ ತಾಣಗಳು ನೆರವಾಗುತ್ತವೆ. ಅವನ್ನು ಊಟದಂತೆ ಬಳಸದೇ ಉಪ್ಪಿನಕಾಯಾಗಿ ಬಳಸಿದಲ್ಲಿ ಖಂಡಿತ ಅದರ ರುಚಿ ಅಂದರೆ ಫಲಿತಾಂಶದ ಮೇಲಾಗುವ ಪರಿಣಾಮವನ್ನು ಗುರುತಿಸಬಹುದಾಗಿದೆ.
ಇಂದಿನ ಸ್ಪಧಾತ್ಮಕ ಯುಗದಲ್ಲಿ ಫಲಿತಾಂಶ ಸರಿಯಾಗಿ ಬರದಿದ್ದರೆ ಮಗುವಿನ ಶೈಕ್ಷಣಿಕ ಬದುಕು, ಭವಿಷ್ಯ ಡೋಲಾಯಮಾನವಾಗುತ್ತದೆ. ಪರೀಕ್ಷಾ ಸಮಯ ಮಕ್ಕಳಿಗಷ್ಟೇ ಅಲ್ಲ ಪಾಲಕರಾದಿಯಾಗಿ ಎಲ್ಲರಿಗೂ ಅಗ್ನಿ ಪರೀಕ್ಷೆಯ ಸಮಯ. ಪರೀಕ್ಷಾ ಸಿದ್ಧತೆಗಳ ಬಗ್ಗೆ ಎಲ್ಲರಿಗೂ ಜವಾಬ್ದಾರಿಗಳಿರುತ್ತವೆ. ಈ ಹಿನ್ನಲೆಯಲ್ಲಿ ಸರ್ವರೂ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ ಮಕ್ಕಳಿಗೆ ಅಚ್ಚುಕಟ್ಟಾಗಿ ಮಾರ್ಗದರ್ಶನ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಬ್ಬಿಣದ ಕಡಲೆಯಾಗದೆ ಸುಲಿದ ಬಾಳೆಹಣ್ಣಾಗುತ್ತದೆ.



Saturday, January 29, 2011